ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕೆಡ್ಡಸ ಹಬ್ಬ ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ತುಳಸಿಕಟ್ಟೆಯ ಮುಂದೆ ಗೋಮಯದಿಂದ ಶುದ್ಧೀಕರಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ, ದೀಪಹಚ್ಚಿ, ತುದಿಎಲೆಯ ಮೇಲೆ ಎಣ್ಣೆ, ಸೀಗೆಕಾಯಿ, ಅರಶಿನ – ಕುಂಕುಮ, ಪಚ್ಚೆ ಹಸಿರಿನ ಹುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿ ದೇವಿಯ ಸ್ನಾನಕೋಸ್ಕರ ಇಟ್ಟು ಹುರುಳಿ, ಹೆಸರುಕಾಳು, ಒಣಕೊಬ್ಬರಿ, ಕಡಲೆಕಾಯಿಗಳ ಮಿಶ್ರಣ(ನನ್ನೇರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು ಊರಿನ ಹಿರಿಯರಾದ ಜಯಂತಿ ಭೂಮಿಗೆ ಎಣ್ಣೆ ಹಾಲು ಹಾಕಿ ಬಡಿಸಿದರು. ವಿದ್ಯಾರ್ಥಿಗಳು ಸುತ್ತ ನಿಂತು ಈ ಕಾರ್ಯಕ್ರಮ ವೀಕ್ಷಿಸಿದರು.

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ದೇವಿಕಾ.ಪಿ.ಶೆಟ್ಟಿ ಕೆಡ್ಡಸದ ಮಹತ್ವ ತಿಳಿಸುತ್ತಾ, ನಮ್ಮ ದೇಶದ ಭಾಷೆ, ಸಂಸ್ಕಾರ, ಸಂಸ್ಕೃತಿ ಭಿನ್ನವಾಗಿದೆ. ತುಳುನಾಡಿನ ಅತ್ಯಂತ ವಿಶಿಷ್ಟವಾದ ಫಲವತ್ತತೆಯನ್ನು ಆರಾಧಿಸುವ ಮೂರು ದಿನಗಳ ಕೃಷಿ ಆಧಾರಿತ ಹಬ್ಬವಾಗಿದೆ. ಪೂರ್ವಿಕರು ಭೂಮಿಯನ್ನು ಹೆಣ್ಣೆಂದೇ ಪರಿಗಣಿಸಿ ಆರಾಧಿಸಿದವರು. ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಪರಿಗಣಿಸಿ, ಆ ನಂಬಿಕೆಯ ಪ್ರಕಾರ ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸ ಹಬ್ಬವನ್ನು ಶುರು ಕೆಡ್ಡಸ, ನಡುಕೆಡ್ಡಸ ಹಾಗೂ ಕಡೆ ಕೆಡ್ಡಸ ಎಂದು ಮೂರು ದಿನ ಆಚರಿಸುತ್ತಾರೆ. ಈ ಮೂರು ದಿನ ನಡೆಯುವ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡೆಯುವುದು ನಿಷಿದ್ಧ. ಯಾಕೆಂದರೆ ಭೂಮಿ ರಜಸ್ವಾಲೆಯಾಗಿರುವುದರಿಂದ ಕೃಷಿ ಕಾರ್ಯದಲ್ಲಿ ತೊಡಗಿದರೆ ಭೂಮಿಗೆ ನೋವಾಗುತ್ತದೆ ಎಂಬ ನಂಬಿಕೆಯಿದೆ. ಕೆಡ್ಡಸದ ಸಮಯದಲ್ಲಿ ಮೂಡಣ ದಿಕ್ಕಿನಿಂದ ಒಂದು ವಿಲಕ್ಷಣವಾದ ಗಾಳಿ ಬೀಸುತ್ತದೆ. ಇದನ್ನು ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ. ಈ ಸಂದರ್ಭ ಋತುಸ್ನಾನ ಮುಗಿಸಿರುವ ಭೂಮಿದೇವಿಯು ಈ ಗಾಳಿಯಿಂದ ಪುಲಕಗೊಂಡು ಫಲವತಿಯಾಗಲು ಸಜ್ಜಾಗುತ್ತಾಳೆ ಎಂಬ ನಂಬಿಕೆಯಿದೆ. ಇಂತಹ ಆಚರಣೆಗಳಿಂದ ಮಕ್ಕಳಲ್ಲಿ ಪ್ರಕೃತಿ ಆರಾಧನೆ ಮತ್ತು ಕಾಳಜಿ ಎಳವೆಯಲ್ಲಿಯೇ ಮೂಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭೂಮಿಕಾ, ವೈದೇಹಿ, ಸಾನ್ವಿ ಹಾಗೂ ಗೌರಿನಂದಿನಿ ಕೆಡ್ಡಸ ಕುರಿತಾದ ಹಾಡನ್ನು ಹಾಡಿದರು. ಪ್ರತಿವರ್ಷ ಕೆಡ್ಡಸ ಬಡಿಸಲು ಬರುವ ಹಿರಿಯರಾದ ಜಯಂತಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ವೇದಿಕೆಯಲಿ ರಾಷ್ಟ್ರಸೇವಿಕಾ ಸಮಿತಿಯ ಕಾರ್‍ಯಕಾರಿಣಿ ಸದಸ್ಯರಾದ ಡಾ. ಕಮಲಾ ಪ್ರಭಾಕರ ಭಟ್, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀ ರಘುರಾಜ್ ಮತ್ತು ಮಲ್ಲಿಕಾ ಆರ್ ಶೆಟ್ಟಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಸ್ವಚ್ಛತಾ ಸಹಾಯಕಿ ಸುಮತಿ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತನ್ಮಯಿ ರೈ ಸ್ವಾಗತಿಸಿದರು. ಪ್ರಾಪ್ತಿ ನಿರೂಪಿಸಿದರು. ಸಧ್ವಿ ವಂದಿಸಿದರು.


Be the first to comment on "ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಡ್ಡಸ ಹಬ್ಬ ಆಚರಣೆ"