| ಬಿ.ಸಿ.ರೋಡಿನಲ್ಲಿ ಸಮಾಲೋಚನಾ ಸಭೆ | ಹೋರಾಟ ಸಮಿತಿ ಅಸ್ತಿತ್ವಕ್ಕೆ
ಹತ್ತು ವರ್ಷಕ್ಕೂ ಅಧಿಕ ಕಾಲದಿಂದ ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ತೆರವುಗೊಳಿಸಬೇಕು ಎಂಬ ಕುರಿತು ಬಿ.ಸಿ.ರೋಡಿನಲ್ಲಿ ಸಮಾನ ಮನಸ್ಕ ಸಂಘಟನೆಗಳು ಒಟ್ಟು ಸೇರಿ ಗುರುವಾರ ಸಮಾಲೋಚನಾ ಸಭೆ ನಡೆಸಿತು. ಈ ವೇಳೆ ಮಾರ್ಚ್ 3ರಂದು ಟೋಲ್ ತೆರವು ಆಗ್ರಹಿಸಿ ಸಾಮೂಹಿಕ ಧರಣಿ ನಡೆಸುವ ಕುರಿತು ನಿರ್ಧರಿಸಲಾಯಿತು.
ಮಾಜಿ ಸಚಿವ ಬಿ ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾನ ಮನಸ್ಕ ವಿವಿಧ ಸಂಘಟನೆಗಳು, ಪಕ್ಷಗಳಿಗೆ ಸೇರಿದ ಪ್ರತಿನಿಧಿಗಳು ಭಾಗವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಟೋಲ್ ಗೇಟ್ ತೆರವಿಗೆ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ಮಾರ್ಗದರ್ಶನ ಮಾಡಿದರು.
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಬಂಟ್ವಾಳ ರಚಿಸಲು, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಅವಿರತ ಹೋರಾಟ ನಡೆಸಲು ಸಭೆ ನಿರ್ಧರಿಸಿತು.
ಹೋರಾಟ ಸಮಿತಿಗೆ ಬಿ ರಮಾನಾಥ ರೈ ಅವರನ್ನು ಗೌರವಾಧ್ಯಕ್ಷರಾಗಿ, ಬಿ ಶೇಖರ್ ಹಾಗು ಮೋಹನ್ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂದಿನ ದಿನದಲ್ಲಿ ಸಮಾನ ಮನಸ್ಕರಾದ ಎಲ್ಲರನ್ನು ಒಳಗೊಂಡ ಸಮಾವೇಶ ನಡೆಸಿ ಪೂರ್ಣಪ್ರಮಾಣದ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನೂತನ ಸಮಿತಿ ವತಿಯಿಂದ, ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾರ್ಚ್ 3ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ವರಗೆ ಬೃಹತ್ ಸಾಮೂಹಿಕ ಧರಣಿ ನಡೆಸುವುದಾಗಿ ಸಭೆ ತೀರ್ಮಾನಿಸಿತು. ಮುಂದಿನ ಹಂತದಲ್ಲಿ ಮತ್ತಷ್ಟು ತೀವ್ರತರವಾದ ಹೋರಾಟ ಸಂಘಟಿಸುವುದು, ಟೋಲ್ ಗೇಟ್ ತೆರವು ಗೊಳಿಸಿಯೇ ವಿಶ್ರಮಿಸುವುದು ಎಂದು ಸಭೆ ಘೋಷಿಸಿತು. ಸಭೆಯಲ್ಲಿ ನಾನಾ ಪಕ್ಷಗಳ, ಸಂಘಟನೆಗಳ ಮುಖಂಡರು ಹಾಜರಿದ್ದರು.