| ಫೆಬ್ರವರಿ 20ರಂದು ಪ್ರಶಸ್ತಿ ಪ್ರದಾನ
ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಆಯ್ಕೆಯಾಗಿದ್ದಾರೆ.
ಫೆಬ್ರವರಿ 19ರಂದು ರಾತ್ರಿ ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ ‘ಕಲಿ ಕೀಚಕ’ ಹಾಗೂ ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟಗಳು ಜರಗಲಿವೆ
ಫೆಬ್ರವರಿ 20 ರಂದು ಶುಕ್ರವಾರ ರಾತ್ರಿ ರಂಗಸ್ಥಳದಲ್ಲಿ ಜರಗುವ ‘ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭ’ದಲ್ಲಿ ಗಣ್ಯರ ಸಮ್ಮುಖ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿಯೇ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆಸಮಿತಿ 2025-26 ನೇ ಸಾಲಿಗೆ ಲಕ್ಷ್ಮಣ ಶೆಟ್ಟರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.10,000 ನಗದು,ಶಾಲು,ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ
ಲಕ್ಷ್ಮಣ ಶೆಟ್ಟಿ ತಾರೆಮಾರ್:
ತೆಂಕುತಿಟ್ಟು ಯಕ್ಷಗಾನ ರಂಗದ ಪ್ರತಿಭಾನ್ವಿತ ಕಲಾವಿದರಾದ ಲಕ್ಷ್ಮಣ ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನ ತಾರೆಮಾರಿನಲ್ಲಿ ಕೋಚಪ್ಪ ಶೆಟ್ಟಿ ಮತ್ತು ತುಂಗಮ್ಮ ದಂಪತಿಯ ಮಗನಾಗಿ 1978 ಸೆಪ್ಟೆಂಬರ್ 8 ರಂದು ಜನಿಸಿದರು. ಐದನೇ ತರಗತಿಗೆ ಓದು ನಿಲ್ಲಿಸಿ ಯಕ್ಷಗಾನದತ್ತ ಆಕರ್ಷಿತರಾದ ಅವರು ಪ್ರಸಿದ್ಧ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತರು.ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಗೆ ಪಾದಾರ್ಪಣೆ ಮಾಡಿದ ಲಕ್ಷ್ಮಣ ಶೆಟ್ಟರು ಪೂರ್ವ ರಂಗದಿಂದ ತೊಡಗಿ ಸ್ತ್ರೀವೇಷ, ಪುಂಡವೇಷ, ಕಿರೀಟ ವೇಷಗಳಲ್ಲಿ ಸೈ ಎನಿಸಿಕೊಂಡಿದ್ದಾರೆ.
ಕಟೀಲು ಒಂದನೇ ಮತ್ತು ಆರನೇ ಮೇಳಗಳಲ್ಲಿ ತಿರುಗಾಟ ನಡೆಸಿರುವ ಅವರು ಪ್ರಸ್ತುತ ಐದನೇ ಮೇಳದ ಕಲಾವಿದರಾಗಿದ್ದಾರೆ. ಸುಧೀರ್ಘ 38 ವರ್ಷಗಳ ರಂಗಾನುಭವ ಹೊಂದಿರುವ ಶೆಟ್ಟರು ವಿವಿಧ ಪೌರಾಣಿಕ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ‘ಶ್ರೀದೇವಿ ಮಹಾತ್ಮೆ’ಯ ಮಧು – ಕೈಟಭ, ದೇವೇಂದ್ರ, ವಿದ್ಯುನ್ಮಾಲಿ, ಧೂಮ್ರಾಕ್ಷ ಮೊದಲಾದ ವೇಷಗಳು ಅವರಿಗೆ ಖ್ಯಾತಿ ತಂದುಕೊಟ್ಟಿವೆ.
ಪತ್ನಿ ಮಂಜುಳಾ ಹಾಗೂ ಪುತ್ರಿಯರಾದ ರೀಷ ಮತ್ತು ನಿಧಿ ಅವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿರುವ ಲಕ್ಷ್ಮಣ ಶೆಟ್ಟಿ ತಾರೆಮಾರ್ ಅವರು ತಮ್ಮ ಕಲಾಜೀವನದಲ್ಲಿ ವಿವಿಧೆಡೆ ಸನ್ಮಾನಿತರಾಗಿದ್ದಾರೆ.