ಧೂಳಿನಿಂದ ಆರೋಗ್ಯ ಸಮಸ್ಯೆ ಅನುಭವಿಸಿದ್ದರು, ನಡೆಯಲೂ ಆಗದೆ ಪರದಾಡಿದ್ದರು, ಕೆಸರಿನಿಂದ ಕಂಗಾಲಾಗಿದ್ದರು, ಕೊನೆಗೆ ಕೆಲಸವೇ ಸರಿಯಾಗಿ ಆಗದಿದ್ದಾಗ ಹತಾಶರಾಗಿದ್ದರು. ನಾಲ್ಕು ವರ್ಷಗಳಿಂದ ತಾಳ್ಮೆಯಿಂದ ಸಹಿಸಿಕೊಂಡು ಬಂದಿದ್ದ ಕಲ್ಲಡ್ಕ ಜನತೆಯ ಸಹನೆಯ ಫಲವಾಗಿ ಮೇಲ್ಸೇತುವೆ ನಿರ್ಮಾಣಗೊಂಡಿದೆ.
ವಾಹನಗಳು ವೇಗವಾಗಿ ಓಡಾಡುತ್ತಿರುವ 2.1 ಕಿ.ಮೀ ಉದ್ದದ ಫ್ಲೈಓವರ್ ನಲ್ಲಿ ಸಂಚರಿಸುತ್ತಿದ್ದರೆ, ಇತ್ತ ಅದರ ಕೆಳಗೆ ಕಲ್ಲಡ್ಕ ಪೇಟೆ ತನ್ನ ಪಾಡಿಗೆ ಚಟುವಟಿಕೆಯಿಂದಿದೆ. ಇಲ್ಲಿರುವ ಮ್ಯೂಸಿಯಂ, ಧಾರ್ಮಿಕ ಕೇಂದ್ರಗಳು, ಸೊಸೈಟಿಗಳು, ಅಂಗಡಿ ಮಳಿಗೆಗಳು, ಆಸ್ಪತ್ರೆ, ವಿದ್ಯಾಸಂಸ್ಥೆಗಳು ಚಟುವಟಿಕೆಯಲ್ಲಿ ನಿರತವಾಗಿದೆ. ಇನ್ನೊಂದೆಡೆ ಹೆದ್ದಾರಿಯಲ್ಲಿ ನಾಮಫಲಕ ಅಳವಡಿಕೆಯ ಕೆಲಸ ಕಾರ್ಯಗಳೂ ಆಗುತ್ತಿದ್ದು, ಇದರಲ್ಲಿ ಕಲ್ಲಡ್ಕವನ್ನು ಉಲ್ಲೇಖಿಸಿಲ್ಲ ಎಂಬುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ನಮ್ಮೂರ ಹೆಸರಿರಲಿ:
ಬಿ.ಸಿ.ರೋಡ್, ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಲ್ಲಿ ಬಿ.ಸಿ.ರೋಡಿನಿಂದ ಮಾಣಿವರೆಗೆ ಬಹುತೇಕ ಕೆಲಸ ಕಾರ್ಯಗಳು ಮುಗಿದಿವೆ. ಇದೀಗ ಹೆದ್ದಾರಿ ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡಲು ಕಮಾನು ಮಾದರಿಯ ದಾರಿಸೂಚಕ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ನೂತನ ಹೆದ್ದಾರಿ ನಿರ್ಮಾಣಗೊಂಡ ಬಳಿಕ ಫ್ಲೈಓವರ್, ಎಲಿವೇಟೆಡ್ ರಸ್ತೆ ಹಿನ್ನೆಲೆ ಮುಖ್ಯ ಹೆದ್ದಾರಿ ಜಂಕ್ಷನ್ ಗಳನ್ನು ಬಿಟ್ಟು ಮೇಲಿಂದಲೇ ಹಾದುಹೋಗುವ ಹಿನ್ನೆಲೆ, ಹೊಸತಾಗಿ ಬರುವ ಪ್ರಯಾಣಿಕರು ತಾವು ಯಾವ ಊರಿಗೆ ಬಂದಿದ್ದೇವೆ, ಎಲ್ಲಿಗೆ ಹೋಗಬೇಕು ಎಂಬ ಮಾಹಿತಿ ಪಡೆಯಲು ಈ ಫಲಕಗಳು ಅಗತ್ಯ. ಮಂಗಳೂರು ಭಾಗದಿಂದ ಬೆಂಗಳೂರು ಕಡೆ ಸಾಗುವ ಸಂದರ್ಬ, ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು, ಮೆಲ್ಕಾರ್ ಕಡೆಗೆ ಹೋಗುವ ದಾರಿ ಎಲ್ಲಿ, ಮುಂದೆ ಕಲ್ಲಡ್ಕ, ವಿಟ್ಲ ಕಡೆ ಹೋಗಬೇಕಾದರೆ, ಎಲ್ಲಿ ತಿರುಗಬೇಕು, ಮಾಣಿ ಜಂಕ್ಷನ್ ಗೆ ಹೋಗಿ, ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು ಕಡೆ ಹೋಗಬೇಕಾದರೆ ಎಲ್ಲಿ ಸರ್ವೀಸ್ ರಸ್ತೆಗೆ ಇಳಿಯಬೇಕು ಎಂಬ ಮಾಹಿತಿ ಬೇಕಾಗುತ್ತದೆ. ಆದರೆ ಸದ್ಯ ಹಾಕಿದ ಕಮಾನು ಮಾದರಿಯ ಫಲಕದಲ್ಲಿ ಮೆಲ್ಕಾರ್ ಕಡೆ ಬರುವ ವೇಳೆ ಮಂಗಳೂರು ವಿಶ್ವವಿದ್ಯಾಲಯ, ಬಿ.ಸಿ.ರೋಡ್, ಮಂಗಳೂರನ್ನು ತೋರಿಸುತ್ತದೆ. ಇದರ ಪಕ್ಕದಲ್ಲಾದರೂ ಸರ್ವೀಸ್ ರಸ್ತೆ ಸನಿಹ ಮೆಲ್ಕಾರ್ ಗೆ ಹೋಗುವ ಮಾರ್ಗವನ್ನು ಸೂಚಿಸಬಹುದಾಗಿತ್ತು. ಆದರೆ ಹಾಗೆ ಮಾಡಿಲ್ಲ.
ಕಲ್ಲಡ್ಕದ ಫ್ಲೈಓವರ್ ಆರಂಭದಲ್ಲಿ (ಎರಡೂ ಬದಿಯಿಂದಲೂ) ಎಡಭಾಗದಲ್ಲಿ ವಿಟ್ಲವನ್ನು ತೋರಿಸುತ್ತದೆ. ವಿಟ್ಲಕ್ಕೆ ಹೋಗಬೇಕಿದ್ದರೆ, ಸರ್ವೀಸ್ ರಸ್ತೆ ಮೂಲಕ ಹೋಗಬಹುದು ಎಂಬ ಸೂಚನೆ ಇದೆಯಾದರೂ ನೀವೀಗ ಕಲ್ಲಡ್ಕದಲ್ಲಿದ್ದೀರಿ ಎಂಬುದನ್ನು ಸರ್ವೀಸ್ ರಸ್ತೆ ಆರಂಭದ ಆಸುಪಾಸಿನಲ್ಲಿ ಹಾಕಬೇಕಿತ್ತು. ಆದರೆ ಹಾಗೆ ಇನ್ನೂ ಹಾಕಿಲ್ಲ.
ಕ್ರಾಸಿಂಗ್ ಮಾಡಿದ್ದೂ ಸರಿ ಇಲ್ಲ:
ಬಿ.ಸಿ.ರೋಡಿನಿಂದ ಕಲ್ಲಡ್ಕಕ್ಕೆ ಸರ್ವೀಸ್ ರಸ್ತೆಯಲ್ಲಿ ಬರುವಾಗ, ಅಲ್ಲಿಂದ ಕಲ್ಲಡ್ಕ ಜಂಕ್ಷನ್ (ವಿಟ್ಲಕ್ಕೆ ತಿರುಗುವ ದಾರಿ)ವರೆಗೆ 1.2 ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ಕಡೆ ಕ್ರಾಸಿಂಗ್ ವ್ಯವಸ್ಥೆ ಇದೆ. ಆದರೆ ಅಲ್ಲಿಂದ ಮುಂದೆ 1.1 ಕಿ.ಮೀ. ದೂರಕ್ಕೆ ಒಂದು ಕ್ರಾಸಿಂಗ್ ಕೂಡ ಇಲ್ಲ. ಕಲ್ಲಡ್ಕ ಪೋಸ್ಟ್ ಆಫೀಸ್ ಹತ್ತಿರವಾದರೂ ಕ್ರಾಸಿಂಗ್ ಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಕಲ್ಲಡ್ಕದಲ್ಲಿ ಏನೇನಿದೆ?
ಸರ್ವೀಸ್ ರಸ್ತೆ ಆರಂಭದಲ್ಲಿ ಸೂಚನಾ ಫಲಕವಿದ್ದರೆ, ಕಲ್ಲಡ್ಕಕ್ಕೆ ಹೋಗುವವರಿಗೆ ಈ ಜಾಗ ಕಲ್ಲಡ್ಕ ಎಂದು ಗೊತ್ತಾಗುತ್ತದೆ. ಕಾರಣ, ಕಲ್ಲಡ್ಕದಲ್ಲಿ ಕೆ.ಟಿ. ಹೋಟೆಲ್ ಗಳಷ್ಟೇ ಅಲ್ಲ, ವಾಣಿಜ್ಯ ವ್ಯವಹಾರಕ್ಕೆಸಂಬಂಧಿಸಿ ಹತ್ತಕ್ಕೂ ಅಧಿಕ ಕೋಅಪರೇಟಿವ್ ಸೊಸೈಟಿ ಇದೆ. ಶ್ರೀರಾಮ ವಿದ್ಯಾಕೇಂದ್ರ, ಸರಕಾರಿ ಶಾಲೆ, ಮಸೀದಿ, ರಾಮಮಂದಿರ, ಆಸ್ಪತ್ರೆ, ಬಟ್ಟೆ ಮಳಿಗೆಗಳೂ ಇವೆ. ಕಲ್ಲಡ್ಕ ಮ್ಯೂಸಿಯಂ ಗೆ ದೇಶ, ವಿದೇಶಗಳಿಂದ ಅತಿಥಿಗಳು ಆಗಮಿಸುತ್ತಾರೆ. ಕಲ್ಲಡ್ಕ ಎಂಬ ಹೆಸರು ಜನರ ಮನಸ್ಸಿನಲ್ಲಿದೆ, ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇಲಾಖೆ ಇದನ್ನು ಮರೆಸದೇ ಇದ್ದರೆ ಸಾಕು.
ಕಲ್ಲಡ್ಕ ಎಂಬುದು ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕವಾಗಿಯಷ್ಟೇ ಅಲ್ಲ, ವಾಣಿಜ್ಯ ದೃಷ್ಟಿಯಿಂದಲೂ ಮುಖ್ಯ ಪೇಟೆ. ಇದರ ಗುರುತಿಗಾದರೂ ಹೆದ್ದಾರಿಯಲ್ಲಿ ಕಲ್ಲಡ್ಕ ಪ್ರದೇಶದಲ್ಲಿ ನಾವಿದ್ದೇವೆ ಎಂದು ಗೊತ್ತುಪಡಿಸಲು ನಾಮಫಲಕ ಹಾಕಬೇಕು. ಈ ಮೂಲಕ ಈ ಪ್ರದೇಶದ ಅಸ್ಮಿತೆಯನ್ನು ಉಳಿಸಬೇಕು ಎನ್ನುತ್ತಾರೆ ಕಲ್ಲಡ್ಕ ಮ್ಯೂಸಿಯಂ ಮಾಲೀಕ ಮಹಮ್ಮದ್ ಯಾಸೀರ್
View Comments
ಜನಾಭಿಪ್ರಾಯ ಮೂಡಿಸುವ ಸಾಂದರ್ಭಿಕ ಲೇಖನ.ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯ ಜಾಗೃತ Bantwal News channel.