ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯಿತಿ ಅಧಿಕಾರ ಮತ್ತಷ್ಟು ಬಲಗೊಳ್ಳುತ್ತದೆ, ಕಾಂಗ್ರೆಸ್ ಪಕ್ಷ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಯೋಜನೆಯಿಂದ ಗ್ರಾಮ ಪಂಚಾಯಿತಿಯ ಸ್ವಾಯತ್ತೆ ಮೊಟಕುಗೊಳಿಸುವ ವಿಷಯವೇ ಇಲ್ಲ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮಗಳಲ್ಲಿ ಶಾಶ್ವತ ಆಸ್ತಿ ನಿರ್ಮಾಣ, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ಕೇಂದ್ರ ಮತ್ತು ರಾಜ್ಯ ಸಹಕಾರದೊಂದಿಗೆ ಬಲಿಷ್ಠ ಹಣಕಾಸು ವ್ಯವಸ್ಥೆ, ಉದ್ಯೋಗದೊಂದಿಗೆ ಕೌಶಲ್ಯಾಭಿವೃದ್ಧಿಯೊಂದಿಗೆ ಗ್ರಾಪಂಗಳಿಗೆ ಸಶಕ್ತ ಅಧಿಕಾರ ನಿರ್ಮಾಣ ಇದರ ಗುರಿಯಾಗಿದ್ದು, ರಾಜ್ಯಗಳ ಆರ್ಥಿಕ ಹೊಡೆತವಾಗುತ್ತಿದೆ ಎಂಬುದು ಸುಳ್ಳು, ಕೇಂದ್ರದ ಕೊಡುಗೆ ಇನ್ನೂ ಹೆಚ್ಚಲಿದೆ ಎಂದರು.
ಯುಪಿಎ ಸರಕಾರ ಇದ್ದಾಗಲೇ ಇದನ್ನು ಆಗಿನ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ಕುರಿತು ಹೇಳಿದ್ದರು ಎಂದ ಶಾಸಕರು, ಯೋಜನೆ ದುರುಪಯೋಗವಾಗುವುದನ್ನು ತಡೆಯಲು ಮಾರ್ಪಾಡು ಮಾಡಲಾಗಿದೆ. ಈಗಾಗಲೇ ಹಲವು ಬಾರಿ ಯೋಜನೆಯ ಹೆಸರು ಬದಲಾವಣೆಯಾಗಿದ್ದು, ಪ್ರತಿಪಕ್ಷಗಳು ವಿನಾ ಕಾರಣ ಆರೋಪ ಮಾಡುತ್ತಿವೆ. ಕೆಲಸದ ಅವಧಿ ಹೆಚ್ಚಳ ಮಾಡುವ ಹಾಗೂ ಹೆಚ್ಚು ಸಂಪಾದನೆ ನೀಡುವ ಯೋಜನೆಯಿಂದ ಕಾಂಗ್ರೆಸ್ ಗೆ ಯಾಕೆ ಸಮಸ್ಯೆಯಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಈ ಕುರಿತು ಪಂಚಾಯತ್ ಮಟ್ಟದಲ್ಲಿ ಮಾಹಿತಿ ಕೊಡುವ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಮುಖಂಡ ವಿಕಾಸ್ ಪುತ್ತೂರು ಮಾತನಾಡಿ, ಕಾಂಗ್ರೆಸ್ ಪಕ್ಷ ವಿಚಲಿತವಾದದ್ದರಿಂದಲೇ ಈ ರೀತಿ ಆಪಾದನೆಗಳನ್ನು ಮಾಡುತ್ತಿದೆ. ಮಹಾತ್ಮಾ ಗಾಂಧೀಜಿ ಅವರು ಗೋಹತ್ಯೆ ಮಹಾಪಾಪ ಎಂದಿದ್ದರು, ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ತಂದದ್ದನ್ನು ಏಕೆ ವಿರೋಧಿಸಿದರು ಎಂದು ಪ್ರಶ್ನಿಸಿ, ಕಾಂಗ್ರೆಸ್ ಗೆ ಗಾಂಧೀಜಿ, ಅಂಬೇಡ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ, ಅರಾಜಕತೆ ಮೂಡಿಸುವ ಸಲುವಾಗಿ ಈ ರೀತಿ ಮಾಡುತ್ತಿದೆ, ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು.
ಬಿಜೆಪಿ ಜಿಲ್ಲೆ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.