ಬಿ.ಸಿ.ರೋಡ್ ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದ್ದು, ಇದರಲ್ಲಿ ಬಿ.ಸಿ.ರೋಡ್ ನಿಂದ ಮಾಣಿವರೆಗಿನ ಕೆಲಸ ಕಾರ್ಯಗಳಲ್ಲಿ ಹೆಚ್ಚಿನವು ಪೂರ್ಣಗೊಂಡಿವೆ. ಇದೀಗ ಬಿ.ಸಿ.ರೋಡ್ ನಿಂದ ಮಾಣಿಗೆ ಕೇವಲ ಹತ್ತು ನಿಮಿಷದಲ್ಲಿ ಅಡೆತಡೆಯಿಲ್ಲದ ಪ್ರಯಾಣ ಸಾಧ್ಯ. ಇದೇ ರಸ್ತೆಯ ಎಡಬಲಗಳಲ್ಲಿ ಎರಡು ಕಟ್ಟಡ ರಚನೆಗಳು ಕಾಣಸಿಗುತ್ತವೆ. ಇವು ಪ್ರಯಾಣಿಕರ ಅನುಕೂಲಕ್ಕೆಂದು ಮಾಡಿದ ವ್ಯವಸ್ಥೆ. ಸಾಮಾನ್ಯವಾಗಿ ಹೆದ್ದಾರಿ ನಿರ್ಮಾಣದ ವೇಳೆ ಇಂಥ ಸ್ನಾನಗೃಹಗಳನ್ನು ನಿರ್ಮಿಸಬೇಕು ಎಂಬ ನಿಯಮವಿದ್ದು, ಅದರನುಸಾರವಾಗಿ ಕುದ್ರೆಬೆಟ್ಟು ಮತ್ತು ಸೂರಿಕುಮೇರಿಯಲ್ಲಿ ರಸ್ತೆಯಲ್ಲಿ ಬೆಂಗಳೂರು ಕಡೆ ಸಾಗುವವರು ಮತ್ತು ಮಂಗಳೂರು ಕಡೆ ಸಾಗುವ ಘನವಾಹನ ಚಾಲಕರ ವಿಶೇಷವಾಗಿ ಟ್ರಕ್ ನಂಥ ವಾಹನಗಳನ್ನು ಚಲಾಯಿಸುವವರ ಅನುಕೂಲಕ್ಕಾಗಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಕ್ಕೆ ಟ್ರಕ್ ಲೇಬೈ ಎಂದು ಆಂಗ್ಲದಲ್ಲಿ ಹೆಸರು.
ಹೆದ್ದಾರಿಗಳ ಅಂಚಿನಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸಲು ಮತ್ತು ಟ್ರಕ್ ಚಾಲಕರು ಸುರಕ್ಷಿತವಾಗಿ ವಿಶ್ರಾಂತಿ ಪಡೆಯಲು ಇದು ಅನುವು ಮಾಡಿಕೊಡುತ್ತದೆ. ಪಾರ್ಕಿಂಗ್ ಜಾಗವೂ ಇಲ್ಲಿದೆ. ಚಾಲಕರಿಗೆ ವಿರಾಮ ನೀಡುವುದರಿಂದ ನಿದ್ರೆ ಅಥವಾ ದಣಿವನ್ನು ಕಡಿಮೆ ಮಾಡಿ, ರಾತ್ರಿ ವೇಳೆಯ ಅಪಘಾತಗಳನ್ನು ಇದು ತಡೆಯುತ್ತದೆ.
ಹೆದ್ದಾರಿ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಕಲ್ಲಡ್ಕ ಸಮೀಪ ಕುದ್ರೆಬೆಟ್ಟು ಹಾಗೂ ಸೂರಿಕುಮೇರುವಿನಲ್ಲಿ ಸುಸಜ್ಜಿತ ಸ್ನಾನಗೃಹಗಳು ನಿರ್ಮಾಣಗೊಂಡಿವೆ. ಎರಡೂ ಭಾಗದ ಹೆದ್ದಾರಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಕೈಗೊಳ್ಳಲಾಗಿದೆ.
ಬಳಕೆ ಉಚಿತ:
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಲ್ಲಿ ಇದನ್ನು ನಿರ್ವಹಿಸುತ್ತವೆ. ಇಲ್ಲಿ ನೀರಿನ ವ್ಯವಸ್ಥೆ, ಶೌಚ, ಸ್ನಾನದ ವ್ಯವಸ್ಥೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿದೆ. ಅಂಗವಿಕಲರಿಗೂ ವಿಶೇಷವಾದ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಸ್ನಾನಗೃಹದ ಬಳಕೆ ಉಚಿತವಾಗಿರುತ್ತದೆ ಎಂದು ಸಂಬಂಧಪಟ್ಟವರು ಮಾಹಿತಿ ನೀಡಿದ್ದಾರೆ.
ಗುತ್ತಿಗೆ ನಿರ್ವಹಣಾ ಕಂಪನಿಗಳು ಎಂಟು ವರ್ಷಗಳ ಕಾಲ ಹೆದ್ದಾರಿಯನ್ನು ನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಸ್ನಾನಗೃಹದ ನಿರ್ವಹಣೆಯ ಜವಾಬ್ದಾರಿಯೂ ಇದಕ್ಕಿದೆ. ಮೇಲುಸ್ತುವಾರಿಯನ್ನು ಹೆದ್ದಾರಿ ಇಲಾಖೆ ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಏನಿದು ಟ್ರಕ್ ಲೇಬೈ?
ಟ್ರಕ್ ಲೇ ಬೈ ಅಥವಾ ಲೇ ಬೈ ಬೇ ಎನ್ನುವುದು ಹೆದ್ದಾರಿಗಳ ಪಕ್ಕದಲ್ಲಿ ಟ್ರಕ್‌ಗಳು ಮತ್ತು ಭಾರಿ ವಾಹನಗಳು ಸುರಕ್ಷಿತವಾಗಿ ನಿಲ್ಲಿಸಲು, ವಿಶ್ರಾಂತಿ ಪಡೆಯಲು ಅಥವಾ ದುರಸ್ತಿ ಮಾಡಲು ಮೀಸಲಾದ ಸಣ್ಣ ಜಾಗ. ಇದು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಚಾಲಕರಿಗೆ ವಿಶ್ರಾಂತಿ ನೀಡಲು ನೆರವಾಗುತ್ತದೆ. ಕೆಲವು ಜಾಗಗಳಲ್ಲಿ ರೆಸ್ಟೋರೆಂಟ್‌ಗಳು, ಶೌಚಾಲಯಗಳು ಮತ್ತು ಪ್ರಥಮ ಚಿಕಿತ್ಸಾ ಕೇಂದ್ರಗಳಂತಹ ಸೌಲಭ್ಯಗಳೂ ಇರುತ್ತವೆ. ಪ್ರಸ್ತುತ ಕುದ್ರೆಬೆಟ್ಟು ಮತ್ತು ಸೂರಿಕುಮೇರುಗಳಲ್ಲಿ ಶೌಚಾಲಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ.