ಜನವರಿ 13 ರಂದು ರಾತ್ರಿ ನಿಧನರಾದ ಜಕ್ರಿಬೆಟ್ಟು ನಿವಾಸಿ, ಸಿಪಿಐಎಂ ಪಕ್ಷದ ಹಿರಿಯ ಧುರೀಣ ಬಂಟ್ವಾಳ ಸಂಜೀವ ಬಂಗೇರ ಅವರಿಗೆ ನುಡಿನಮನ ಕಾರ್ಯಕ್ರಮ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಜ.26ರಂದು ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ನಾನಾ ರಾಜಕೀಯ, ಸಾಮಾಜಿಕ ಗಣ್ಯರು, ಹೋರಾಟಗಾರರು, ಬಂಟ್ವಾಳ, ಮಂಗಳೂರು ಸಹಿತ ಹಲವು ಕಡೆಗಳಿಂದ ಬಂದ ಅಭಿಮಾನಿಗಳು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭ ನುಡಿನಮನ ಸಲ್ಲಿಸಿದ ನಿವೃತ್ತ ಮುಖ್ಯೋಪಾಧ್ಯಾಯ, ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ, ಕಾರ್ಮಿಕ ಮುಖಂಡ ದಿವಂಗತ ಸಂಜೀವ ಬಂಗೇರ ಅವರು ಸರಳ-ಸಜ್ಜನಿಕೆಯ ವ್ಯಕ್ತಿತ್ವ ಮೈಗೂಡಿಸಿಕೊಂಡವರು, ಎಲ್ಲರೊಂದಿಗೂ ಮೃದುವಾಗಿ ಪ್ರೀತಿ ಸೌಜನ್ಯದಿಂದ ಜೀವನದುದ್ದಕ್ಕೂ ಬದುಕಿದವರು. ಕಾರ್ಮಿಕರ ಪರ ಹೋರಾಟದಲ್ಲಿ ಅವರು ಎಂದಿಗೂ ಯರೊಂದಿಗೂ ರಾಜಿ ಮಾಡಿಕೊಂಡವರಲ್ಲ. ಹೋರಾಟದ ಮೂಲಕ ಕಾರ್ಮಿಕ ಸಮೂಹಕ್ಕೆ ಆನೆ ಬಲ ತುಂಬಿದವರು ಅಂಥ ನಾಯಕರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರವಲ್ಲ ಇಡೀ ನಾಗರಿಕ ಸಮಾಜಕ್ಕೆ, ದುಡಿಯುವ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸಿಪಿಎಂ ಪರವಾಗಿ ಬಾಲಕೃಷ್ಣ ಶೆಟ್ಟಿ ನುಡಿನಮನ ಸಲ್ಲಿಸಿ, ಸಂಜೀವ ಬಂಗೇರ ಅವರ ಹೋರಾಟದ ನೆನಪು ಮಾಡಿದರು.
ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ ಎಂ ಪಿ ಶ್ರೀನಾಥ್, ಕಸಾಪ ಕಡಬ ಘಟಕಾಧ್ಯಕ್ಷ ಸೇಸಪ್ಪ ರೈ, ಸವಿತಾ ಸಮಾಜ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ಉಡುಪಿ ಪರಿಯಾಳ ಸಮಾಜದ ಜಿಲ್ಲಾಧ್ಯಕ್ಷ ಶಂಕರ ಸಾತಿಯಾನ್ ಕಟಪಾಡಿ, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ವಾಸು ಪೂಜಾರಿ ಲೊರೆಟ್ಟೊ, ಬಿ ಎಂ ಅಬ್ಬಾಸ್ ಅಲಿ, ಬಿ ಎಂ ಭಟ್, ಸದಾಶಿವ ಬಂಗೇರ, ಮುನೀರ್ ಕಾಟಿಪಳ್ಳ, ಹರಿಕೃಷ್ಣ ಬಂಟ್ವಾಳ, ಸಂಜೀವ ಪೂಜಾರಿ ಬೊಳ್ಳಾಯಿ, ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ವಸಂತ ಆಚಾರಿ, ಬೇಬಿ ಕುಂದರ್, ದೇವಪ್ಪ ಪೂಜಾರಿ ಬಾಳಿಕೆ, ರಾಮದಾಸ್ ಬಂಟ್ಟಾಳ, ಪದ್ಮನಾಭ ರೈ, ಅಶ್ವನಿ ಕುಮಾರ್ ರೈ, ಶೇಖರ್ ಬಿ, ಬಾಬು ಭಂಡಾರಿ, ರಝಾಕ್ ಕುಕ್ಕಾಜೆ, ಸುರೇಶ ನಂದೊಟ್ಟು, ಸದಾಶಿವ ಕುರ್ಕಾಲು, ರಾಮಕೃಷ್ಣ ಶೆಟ್ಟಿ ಮೂಡಿಗೆರೆ, ದುರ್ಗಾದಾಸ್ ಶೆಟ್ಟಿ, ನಾರಾಯಣ ಮೈಸೂರು ಸಹಿತ ಹಲವು ಗಣ್ಯರು, ಮೃತರ ಪುತ್ರರಾದ ಉಮೇಶ್ ಬೆಂಗಳೂರು, ವಿಶ್ವನಾಥ ಬಂಟ್ವಾಳ, ಪ್ರವೀಣ್ ಜಕ್ರಿಬೆಟ್ಟು, ಪ್ರಸಾದ್ ಜಕ್ರಿಬೆಟ್ಟು, ಪುತ್ರಿಯರಾದ ಉಷಾ ಮಂಜೇಶ್ವರ, ಆಶಾ ಮಂಗಳೂರು, ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಸಾರ್ವಜನಿಕರು ಭಾಗವಹಿಸಿ ಮೃತರಿಗೆ ನಮನ ಸಲ್ಲಿಸಿದರು. ದಿನೇಶ್ ಎಲ್ ಬಂಗೇರ ಸ್ವಾಗತಿಸಿ. ಎಚ್ಕೆ ನಯನಾಡು ನಿರೂಪಿಸಿದರು.
ಭಾವಪೂರ್ಣವಾಗಿ ನಡೆದ ನುಡಿನಮನ ಕಾರ್ಯಕ್ರಮದ ಕುರಿತು ಲೇಖಕ ಸದಾನಂದ ಬಂಗೇರ ಅವರು ಹೀಗೆ ಬರೆಯುತ್ತಾರೆ. ನಿನ್ನೆ ಕಾರ್ಮಿಕ ದುರೀಣ ಸಂಜೀವ ಬಂಗೇರರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಪಾರ ಸಂಖ್ಯೆಯಲ್ಲಿ ಬಂಗೇರರ ಅಭಿಮಾನಿಗಳು, ಬಂಧು ಮಿತ್ರರು, ಹಿತಚಿಂತಕರು, ಸಂಗಾತಿಗಳು ಭಾಗವಹಿಸಿದ್ದ ಕಾರ್ಯಕ್ರಮ ವದು. ಬಂಗೇರರ ಕುರಿತಾಗಿ ಹೆಚ್ಚಿನ ಅರಿವಿರದ ನನ್ನಂಥವರಿಗೆ ಅಂದು ಮಾತನಾಡಿದ ಅವರ ಜತೆಗಾರರು ಅವರ ಬದುಕು, ಹೋರಾಟ, ಚಳುವಳಿ, ಸಾಧನೆ, ಸವಾಲುಗಳನ್ನು ಎದುರಿಸಿದ ಪರಿ, ಸಿದ್ಧಾಂತಗಳಲ್ಲಿ ರಾಜಿಯಾಗದ ಧೈರ್ಯ ಇವನ್ನೆಲ್ಲ ವಿಶದವಾಗಿ ವಿವರಿಸಿದರು. ಶಿಸ್ತುಬದ್ಧವಾಗಿ ನಡೆದ ಕಾರ್ಯಕ್ರಮ ಬಂಗೇರರಂತಹ ಹಿರಿಯಜೀವಕ್ಕೆ ಸಂದ ಸಾರ್ಥಕ ಗೌರವವಾಗಿತ್ತು. ಇದನ್ನು ನೋಡುತ್ತಿದ್ದ ನನಗೆ ಅಗಲಿದ ಬಂಧುಗಳಿಗೆ ಗೌರವ ಸಲ್ಲಿಸಬೇಕಾದ ಮಾದರಿ ಹೀಗಿರಬೇಕು ಎಂದು ಕಂಡಿತು.
ನಾನು ಇತ್ತೀಚೆಗೆ ಭಾಗವಹಿಸಿದ ಇಂತಹ ಕಾರ್ಯಕ್ರಮ ಗಳಲ್ಲಿ ಆಳಿದ ಜೀವಕ್ಕೆ ಗೌರವ ತೋರಲು ನಾಲ್ಕು ಒಳ್ಳೆಯ ಮಾತುಗಳಾಡಿದ್ದನ್ನು ಕಂಡಿದ್ದು ಕಡಿಮೆ. ಕಾರ್ಯಕ್ರಮ ಅದ್ದೂರಿ ಯದಾಗ ಬೇಕಿಲ್ಲ.ಆದರೆ ಹಿಂದಿನಿಂದ ನಡೆದುಬರುತ್ತಿರುವ ಅವೇ ರೀತಿರಿವಾಜುಗಳು, ಅವೇ ಸವಕಲು ಪದಪುಂಜಗಳು, ಕ್ಲೀಷೆಗಳು, ಒಟ್ಟಾರೆಯಾಗಿ ಮರೆಯಾದ ಮಹನೀಯರಿಗೆ ಸಲ್ಲಬೇಕಾದ ಮಾತಿನ ಗೌರವ ಗೋಚರಿಸುವುದಿಲ್ಲ. ಕಾರ್ಯಕ್ರಮ ನಡೆಸಿಕೊಡುವವರು ರೂಢಿಯಿಂದ ನಡೆದು ಬರುತ್ತಿರುವ ವಿಧಿವಿದಾನ ಗಳಿಗೆ ಮಹತ್ವ ಕೊಡುವಷ್ಟು, ನಮ್ಮಿಂದ ದೂರಾದ ಜೀವ ಬದುಕಿದ ದೀರ್ಘ ಕಾಲದಲ್ಲಿ ಬಂಧುಗಳಿಗೊ, ಜತೆಯಲ್ಲಿ ಬಾಳಿದವರಿಗೋ, ಸುತ್ತಲಿನ ಪರಿಸರಕ್ಕೊ ನೀಡಿದ ಕಾಣಿಕೆಗಳ ಪ್ರಸ್ತಾಪ ಮಾಡುವುದಿಲ್ಲ. ಒಂದು ಮಾತು ಎಲ್ಲರೂ ನೆನಪಿಡಬೇಕಾದುದೇನಂದರೆ ಯಾವುದೇ ವ್ಯಕ್ತಿ ತೀರಾ ಅನುಪಯುಕ್ತ ನಾಗಿರುವುದಿಲ್ಲ. ಆತ ಮಗುವಾಗಿ, ಯವ್ವನಿಗನಾಗಿ, ಪತ್ನಿಗೆ ಪ್ರಿಯ ನಲ್ಲ ನಾಗಿ, ತನ್ನ ಮಕ್ಕಳಿಗೆ ಜವಾಬ್ದಾರಿ ಯುತ ತಂದೆಯಾಗಿ, ತಾಯಿಗೆ ನಲ್ಮೆಯ ಮಗನಾಗಿ, ಜತೆಗೆ ಹುಟ್ಟಿದವರನ್ನು ಆಧರಿಸಿ, ಗೆಳೆಯರ ಪ್ರೀತಿಯನ್ನು ಗಳಿಸಿ, ಸುತ್ತಣ ಸಮಾಜಕ್ಕೆ ತನ್ನಿಂದಾದ ಸೇವೆಯನ್ನು ಮಾಡಿಯೇ ಮಾಡಿರುತ್ತಾನೆ. ಆದರೆ ಅದನ್ನು ಅರಿಯುವ ಮನೋಧರ್ಮ ನಮಗೆ ಬೇಕು. ಸತ್ತವರಿಗೆ ಬಡಿಸುವುದು, ಕಾಗೆಗೆ ಅನ್ನವಿಡುವುದು, ತಲೆ ಬೋಳಿಸುವುದು, ಪಿಂಡಪ್ರದಾನ, ಪ್ರೇತವನ್ನು ಒಳಗೆ ಕರೆಯುವುದು ಇವೆಲ್ಲ ಅಳಿದ ವ್ಯಕ್ತಿಯ ಬಂಧುಗಳ ನಂಬಿಕೆಗೆ ಸಂಬಂಧಿಸಿದ್ದು. ಅದು ಸಾರ್ವಜನಿಕವಾಗಬೇಕೆಂದಿಲ್ಲ. ಆದರೆ ಒಂದು ದಿನದ ಮಟ್ಟಿಗಾದರೂ ಸತ್ತವರ ಆಪ್ತರು, ಗೆಳೆಯರು, ಬಂಧುಗಳು ಒಟ್ಟುಸೇರಿ, ಆತನನ್ನು ನೆನಪಿಸಿಕೊಂಡು ಆತನ ಜತೆ ಕಳೆದ ಆಪ್ತ ಕ್ಷಣಗಳನ್ನು ಹಂಚಿಕೊಂಡರೆ, ಆತನಿಂದಾದ ಉಪಕಾರವನ್ನು ಸ್ಮರಿಸಿಕೊಂಡರೆ ಅಗಲಿದ ಜೀವವನ್ನು ಗೌರವಿಸಿದಂತೆ. ನಿನ್ನೆ ನಡೆದ ಕಾರ್ಯಕ್ರಮ ವನ್ನು ಮಾದರಿಯಾಗಿಸಿಕೊಂಡು ಸರಳವಾಗಿಯಾದರೂ ನುಡಿನಮನದಂತಹ ಸಂಪ್ರದಾಯ ಬೆಳೆದರೆ ಮರೆಯಾದ ಜೀವವನ್ನು ನಿಜವಾದ ಅರ್ಥದಲ್ಲಿ ಗೌರವಿಸಿದಂತೆ.