ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ
ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ… ಆರೋಗ್ಯ ಇಲಾಖೆಯ ಈ ಧ್ಯೇಯ ವಾಕ್ಯವನ್ನು ಸಾರುತ್ತಾ ಬಂಟ್ವಾಳ ತಾಲೂಕಿನ ಹಲವು ಗ್ರಾಮಗಳಲ್ಲಿ ಸಂಸಾರ ಜೋಡುಮಾರ್ಗ ತಂಡ ಸಾರುತ್ತಿದೆ.
ನರಿಕೊಂಬು ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಅವರು , ತಮ್ಕಿ ಬಾರಿಸುವ ಮೂಲಕ ಬೀದಿನಾಟಕ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಈ ತಂಡ ಮಾಣಿ, ತುಂಬೆ, ವೀರಕಂಭ, ಕುಕ್ಕಿಪ್ಪಾಡಿ, ಸಿದ್ದಕಟ್ಟೆ, ಕಜೆಕ್ಕಾರು, ಗೋಳ್ತಮಜಲು, ಬೋಳಂತೂರು, ಸಾಲೆತ್ತೂರು, ಸಜಿಪ ಮುನ್ನೂರು, ಕೆದಿಲ, ಕಡೇಶ್ವಾಲ್ಯ, ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಟಕಗಳನ್ನು ಪ್ರದರ್ಶಿಸಿ, ಆರೋಗ್ಯದ ಸಂದೇಶ ಸಾರಿದರು.
ನಾಟಕದಲ್ಲೇನಿದೆ..?
ನಾಯಿ ಕಡಿತ ಅಥವಾ ಹಾವು ಕಡಿತದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸೆ, ಮನೋವೈದ್ಯ – ಮಾನಸಿಕ ಆರೋಗ್ಯ ಸೇವೆಗಳು, ಕ್ಷಯರೋಗ. ಅಪೌಷ್ಠಿಕತೆ, ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಕಾರ್ಯಕ್ರಮ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್, ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮ, ಭ್ರೂಣ ಲಿಂಗ ಪತ್ತೆ ಶಿಕ್ಷಾ ಅಪರಾಧ, ಸಾಂಕ್ರಾಮಿಕ ಕಾಯಿಲೆಗಳು – ಡೆಂಗ್ಯೂ, ಮಲೇರಿಯಾ ಅಸಾಂಕ್ರಾಮಿಕ ಕಾಯಿಲೆಗಳು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಕುಟುಂಬ ಕಲ್ಯಾಣ ಕಾರ್ಯಕ್ರಮ, ಗೃಹ ಆರೋಗ್ಯ ಕಾರ್ಯಕ್ರಮ, ಡಯಾಲಿಸಿಸ್ ಕಾರ್ಯಕ್ರಮ . ಶ್ರವಣ ದೋಷ, ಕಣ್ಣಿನ ಆರೋಗ್ಯ ರಕ್ಷಣೆ ಹೀಗೆ ಹಲವು ವಿಚಾರಗಳನ್ನು ಸಂಸಾರ ಜೋಡುಮಾರ್ಗ ಕಲಾ ತಂಡದ ಕಲಾವಿದರು ಗಮನೀಯ ರೀತಿಯಲ್ಲಿ ಅಭಿನಯಿಸಿದರು. ನಾಟಕವು ಸುಮಾರು ಒಂದು ಗಂಟೆಯ ಅವಧಿಯದ್ದಾಗಿದ್ದು, ಪ್ರತೀ ದೃಶ್ಯಾವಳಿಗಳಿಗೂ ಜಾನಪದ ಶೈಲಿಯ ಹಾಡಿನ ಸಂಯೋಜನೆ ಬೀದಿನಾಟಕದ ಮೆರುಗು ಹೆಚ್ಚಿಸಿತ್ತು.
ಕಥಾ ಹಂದರ ಹೀಗಿದೆ
ಪುಟ್ಟ ಮಗು ಹಾಗೂ ಹದಿಹರೆಯದ ವಿದ್ಯಾರ್ಥಿ ಮೊಬೈಲ್ ನೋಡುವುದನ್ನೇ ಚಟವನ್ನಾಗಿಸಿದ್ದಾರೆ ಎಂಬ ಚಿಂತೆಯಲ್ಲಿ ಮುಳುಗಿದ ಹೆತ್ತವರಿಗೆ ಬುದ್ದಿ ಮಾತು ಹೇಳುವುದರ ಜೊತೆಗೆ ಆರಂಭವಾಗುವ ನಾಟಕ, ವಿವಿಧ ದೃಶ್ಯಗಳ ಮೂಲಕ ನೋಡುಗರ ಮನಸ್ಸಿಗೆ ಮಾಹಿತಿಯ ಜೊತೆಗೆ ಔಷಧಿಯನ್ನೂ ನೀಡುತ್ತಾ ಸಾಗುತ್ತದೆ. ಸಂಸಾರ ಜೋಡುಮಾರ್ಗ ತಂಡದ ನಿರ್ದೇಶಕ ,ಪತ್ರಕರ್ತ ಮೌನೇಶ ವಿಶ್ವಕರ್ಮ ನೇತೃತ್ವದ ತಂಡದಲ್ಲಿ ಪೃಥ್ವಿರಾಜ್ ಕೊಕ್ಕಪುಣಿ, ಬೆಳಂದೂರು ರಾಕೇಶ್ ಆಚಾರ್ಯ, ವಿಷ್ಣುಗುಪ್ತ ಪುಣಚ, ಪ್ರಜ್ವಲ್, ಭುವನೇಶ್ ಬಿ.ಸಿ.ರೋಡು ರವರು ಕಲಾವಿದರಾಗಿ ಭಾಗವಹಿಸಿದ್ದರು.
ಸಹಭಾಗಿತ್ವ:
ಬಂಟ್ವಾಳ ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದು, ತಾಲೂಕಿನ ಸಂಜೀವಿನಿ ಒಕ್ಕೂಟಗಳ ವಿಶೇಷ ಸಹಭಾಗಿತ್ವದೊಂದಿಗೆ ನಡೆದ ಆರೋಗ್ಯ ಜಾಥಾ ಒಕ್ಕೂಟ ಸದಸ್ಯರ ಹುರುಪಿನ ಭಾಗವಹಿಸುವಿಕೆಯೊಂದಿಗೆ ಮೂಡಿಬಂತು.
ಬಂಟ್ವಾಳ ತಾಲೂಕು ಆರೋಗ್ಯ ಇಲಾಖೆಯ ಪ್ರಭಾರ ಆರೋಗ್ಯ ಶಿಕ್ಷಣಾಧಿಕಾರಿ ಕುಸುಮ, ಸಂಜೀವಿನಿ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಸುಧಾ, ಪ್ರದೀಪ್ ಕಾಮತ್, ಕುಸುಮ, ಸಾಂಘವಿ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರಾದ ಬಸ್ತಿ ಮಾಧವ ಶೆಣೈ, ಬಂಟ್ವಾಳ ಟೌನ್ ರೋಟರಿ ಕ್ಲಬ್ ಅಧ್ಯಕ್ಷರಾದ ವಚನ್ ಶೆಟ್ಟಿ, ಕಾರ್ಯದರ್ಶಿ ನಾಗೇಶ್, ರೋಟರಿ ಸದಸ್ಯರಾದ ನಾರಾಯಣ ಹೆಗ್ಡೆ, ಮಹಮ್ಮದ್ ವಳವೂರು, ಚಿತ್ತರಂಜನ್ ಶೆಟ್ಟಿ , ಗಣೇಶ್ ಶೆಟ್ಟಿ ಗೋಳ್ತಮಜಲು ಮೊದಲಾದವರು ಜಾಥಾದುದ್ದಕ್ಕೂ ಭಾಗವಹಿಸಿದರು.