ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜಾರಿಗೊಳಿಸಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಸ್ವರೂಪ ಬದಲಾಯಿಸಿದ್ದಲ್ಲದೆ, ಮಹಾತ್ಮಾ ಗಾಂಧಿ ಹೆಸರು ಬದಲಾಯಿಸಲು ಹೊರಟ ಕೇಂದ್ರ ಸರಕಾರ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ ನಡೆಯುತ್ತಿದ್ದು, ಜ.27ರಂದು ಬಂಟ್ವಾಳದಲ್ಲಿ ಕಾಂಗ್ರೆಸ್ ನಿಂದ ನರೇಗಾ ಬಚಾವೊ ಅಭಿಯಾನ ನಡೆಯಲಿದೆ.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜ.27ರಂದು ಬೆಳಗ್ಗೆ 9.30ಕ್ಕೆ ಮಣಿಹಳ್ಳದಿಂದ ಬಿ.ಸಿ.ರೋಡ್ ಕೈಕಂಬವರೆಗೆ ಪಾದಯಾತ್ರೆ, ಬಳಿಕ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ಇದಕ್ಕೂ ಮೊದಲು ಕಾಂಗ್ರೆಸ್ ಅಧಿಕಾರವಿರುವ ಗ್ರಾಪಂಗಳಲ್ಲಿ ಈ ಕುರಿತು ವಿರೋಧಿ ನಿರ್ಣಯ ಹಾಗೂ ಅಧಿಕಾರದಲ್ಲಿಲ್ಲದ ಗ್ರಾಪಂಗಳಲ್ಲಿ ಮನವಿ ಸಲ್ಲಿಕೆ ಮಾಡಲಾಗುವುದು. ಯುಪಿಎಯ ಹಲವು ಮಹತ್ವಾಕಾಂಕ್ಷಿ ಹಾಗೂ ಜನಸಾಮಾನ್ಯರ ಪರ ಇರುವ ಯೋಜನೆಗಳ ಹೆಸರು ಬದಲಾವಣೆ ಹಾಗೂ ಸ್ವರೂಪವನ್ನೇ ಬದಲಾಯಿಸುವ ಕೆಲಸವನ್ನು ಈಗಿನ ಕೇಂದ್ರ ಸರಕಾರ ಮಾಡುತ್ತಿದೆ. ನರೇಗಾದ ಸ್ವರೂಪ ಬದಲಾಯಿಸಿ ಶೇ.60 ಮತ್ತು 40 ಅನುಪಾತವನ್ನು ಮಾಡಿರುವುದು ಸ್ಥಳೀಯಾಡಳಿತಕ್ಕೆ ಹೊರೆಯಾಗಲಿದೆ ಎಂದು ರೈ ವಿಶ್ಲೇಷಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಮಲ್ಲಿಕಾ ಶೆಟ್ಟಿ, ಲವೀನಾ ವಿಲ್ಮಾ ಮೊರಾಸ್, ಸುದರ್ಶನ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಲುಕ್ಮಾನ್ ಉಪಸ್ಥಿತರಿದ್ದರು.