ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಸಂಜೀವ ಬಂಗೇರ (87) ವಯೋಸಹಜ ಅನಾರೋಗ್ಯದಿಂದ ಜ.13ರಂದು ರಾತ್ರಿ 11 ಗಂಟೆ ವೇಳೆ ಬಂಟ್ವಾಳದ ಜಕ್ರಿಬೆಟ್ಟುವಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪುರಸಭೆ ಮಾಜಿ ಸದಸ್ಯ ಪ್ರವೀಣ್ ಜಕ್ರಿಬೆಟ್ಟು ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅವರು ಹೊಂದಿದ್ದರು.
ಸಿಪಿಐಎಂ ಪಕ್ಷದ ನಾನಾ ಹುದ್ದೆಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾಗಿದ್ದರು. ಬಂಟ್ವಾಳ ತಾಲೂಕು ಬೀಡಿ ಕೆಲಸಗಾರರ ಸಂಘ ದ. ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು,
ತಾಲೂಕು ಬೀಡಿ ಕೆಲಸಗಾರರ ಸಂಘ ದ ಅಧ್ಯಕ್ಷರಾಗಿ, ಸಿಐಟಿಯು ದ.ಕ. ಜಿಲ್ಲಾ ಉಪಾಧ್ಯಕ್ಷರಾಗಿ, ದ.ಕ. ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷರಾಗಿ, ಮೂಡುಬಿದಿರೆ, ಬೆಳ್ತಂಗಡಿ ಮೊದಲಾದ ಕಡೆ ಬೀಡಿ ಕಾರ್ಮಿಕರ ಸಂಘಟನೆ ಕಟ್ಟಿ ಬೆಳೆಸಲು ಶ್ರಮಿಸಿದ್ದರು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಸಹಿತ ಹಲವು ಗಣ್ಯರು ಅಗಲಿದ ಮುಖಂಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.