ಖರೀದಿಸಿ ಮೂರು ವರ್ಷಗಳಾದವು. ಒಮ್ಮೆಯೂ ಗಾಡಿ ಸ್ಟಾರ್ಟ್ ಆಗಲೇ ಇಲ್ಲ. ಆಪರೇಟರ್ ಇಲ್ಲ ಹೀಗಾಗಿ ಹೊರಟಿಲ್ಲ ಎನ್ನಲಾದರೂ ಸದ್ಯ ಯಂತ್ರ ದುರಸ್ತಿ ಮಾಡಿಯೇ ಉಪಯೋಗಿಸಬೇಕಿದೆ ಎಂಬ ಸ್ಥಿತಿಯಲ್ಲಿದೆ.
ಬಂಟ್ವಾಳ ಪುರಸಭೆಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ಖರೀದಿಸಲಾದ ಹೊಸ ಹಿಟಾಚಿ ಯಂತ್ರದ ಸ್ಥಿತಿ ಇದು. ಆಪರೇಟರ್ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅದನ್ನು ಉಪಯೋಗಿಸುತ್ತಿರಲಿಲ್ಲ. ಈ ರೀತಿ ಹೊಸ ಯಂತ್ರವು ಹಾಗೇ ನಿಂತಿರುವುದರಿಂದ ಅದರ ಭಾಗಗಳು ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಿದ್ದು, ಇನ್ನೂ ಹಾಗೇ ಬಿಟ್ಟರೆ ಮುಂದೆ ಹೊಸ ಯಂತ್ರವನ್ನೇ ಗುಜರಿಗೆ ಹಾಕಬೇಕಾದ ಅಪಾಯವೂ ಇದೆ.
ಆಪರೇಟರ್ ಇಲ್ಲ:
ಯಂತ್ರ ಚಲಾಯಿಸಲು ಆಪರೇಟರ್ ಇಲ್ಲ. ಹೀಗಾಗಿ ಯಂತ್ರ ಹೊರಟಿಲ್ಲವಾದರೂ ಯಂತ್ರಗಳಿರಲಿ, ವಾಹನಗಳಿರಲಿ, ಚಾಲನಾ ಸ್ಥಿತಿಯಲ್ಲಿದ್ದರೆ ಮಾತ್ರ ಸುಸ್ಥಿತಿಯಲ್ಲಿರಲು ಸಾಧ್ಯ. ಬಂಟ್ವಾಳ ಪುರಸಭೆಯ ಹೊಸ ಹಿಟಾಚಿ ಯಂತ್ರವನ್ನು ಒಂದು ದಿನವೂ ಆನ್ ಆಗದೆ ಹಾಗೇ ಟರ್ಪಾಲು ಹಾಕಿ ನಿಲ್ಲಿಸಲಾಗಿತ್ತು. ಈಗ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅದನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿರಿಸಲು ಇಂಜಿನಿಯರ್ ಗೆ ಸೂಚಿಸಿದ್ದಾರೆ.
ಅಮೃತ್ ನಿರ್ಮಲ್ ಯೋಜನೆ ಮೂಲಕ ಮಂಜೂರು:
ಬಂಟ್ವಾಳ ಪುರಸಭೆಗೆ ಅಮೃತ ನಿರ್ಮಲ್ ಯೋಜನೆಯ ಮೂಲಕ ಮಂಜೂರಾದ 1 ಕೋ.ರೂ.ಅನುದಾನವನ್ನು ಬಿ.ಸಿ.ರೋಡಿನಲ್ಲಿ ನಿರ್ಮಿಸಿದ ಪಿಂಕ್ ಟಾಯ್ಲೆಟ್ ನಿರ್ಮಾಣ, ಹಿಟಾಚಿ, ಸಕ್ಕಿಂಗ್ ಯಂತ್ರ ಖರೀದಿ ಸೇರಿ ಹಲವು ಯೋಜನೆಗಳಿಗೆ ಬಳಸಲಾಗಿತ್ತು. ಹಿಟಾಚಿ ಯಂತ್ರದ ಜತೆಗೆ ಅದೇ ಸಮಯದಲ್ಲಿ ಸಕ್ಕಿಂಗ್ ಯಂತ್ರವನ್ನೂ ಖರೀದಿಸಲಾಗಿದ್ದು, ಅದು ಕೂಡ ಸಾಕಷ್ಟು ಸಮಯ ನಿಂತಲ್ಲೇ ನಿಂತಿತ್ತು.
ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿಯ ಉದ್ದೇಶದಿಂದ ಈ ಹಿಟಾಚಿ ಯಂತ್ರವನ್ನು ಖರೀದಿಸಲಾಗಿತ್ತು. ಯಂತ್ರ ಚಾಲನೆಯಾಗದೇ ಇರುವ ಕುರಿತು ಪುರಸಭೆಯ ಪ್ರತಿ ಸಭೆಗಳಲ್ಲೂ ಗಂಭೀರ ಚರ್ಚೆಯಾಗಿದ್ದು, ಅದು ಬರೀ ಚರ್ಚೆಗೆ ಸೀಮಿತವಾಯಿತೇ ಹೊರತು ಆಡಳಿತ ಮಂಡಳಿಯ ಅವಧಿ ಮುಗಿದರೂ ಹಿಟಾಚಿ ಚಾಲನೆಗೆ ಬಂದಿಲ್ಲ.
ಕಸ ವಿಲೇವಾರಿಗೂ ಜೆಸಿಬಿ:
ಪುರಸಭೆಯಲ್ಲಿ ಒಂದು ಜೆಸಿಬಿ ಯಂತ್ರವಿದ್ದು, ಚರಂಡಿಯ ಹೂಳೆತ್ತುವಿಕೆ, ನೀರಿನ ಪೈಪುಲೈನ್ ಕಾಮಗಾರಿಗೆ ಅದನ್ನು ಬಳಕೆ ಮಾಡಲಾಗುತ್ತದೆ. ಆದರೆ ಈಗ ತ್ಯಾಜ್ಯ ಘಟಕದಲ್ಲಿ ಕಸ ವಿಲೇವಾರಿಯ ಕಾಮಗಾರಿಯನ್ನೂ ಇದೇ ಜೆಸಿಬಿ ಯಂತ್ರವೇ ನಿರ್ವಹಿಸುತ್ತಿದೆ. ಗಮನಾರ್ಹ ವಿಚಾರವೆಂದರೆ, ಈ ಜೆಸಿಬಿ ಯಂತ್ರಕ್ಕೂ ಆಪರೇಟರ್ ಇಲ್ಲ. ಪೌರಕಾರ್ಮಿಕರೊಬ್ಬರು ಅದನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಹಿಟಾಚಿ ಯಂತ್ರ ನಿಂತಿರುವ ವಿಚಾರ ಗಮನಕ್ಕೆ ಬಂದಿದ್ದು, ಪ್ರಸ್ತುತ ಅ ದುರಸ್ತಿ ಮಾಡುವುದಕ್ಕೆ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ. ದುರಸ್ತಿಯಾದ ತತ್‌ಕ್ಷಣ ತ್ಯಾಜ್ಯ ಘಟಕಕ್ಕೆ ಸ್ಥಳಾಂತರಿಸಲಾಗುತ್ತದೆ ಎನ್ನುತ್ತಾರೆ ಮುಖ್ಯಾಧಿಕಾರಿ ತೀರ್ಥಪ್ರಸಾದ್