ಬಂಟ್ವಾಳ: ಡಾ. ಗೀತಾ ಎನ್. ಅವರ ಹಕ್ಕಿಮರಿ ಮತ್ತು ಇತರ ಕಿಶೋರ ಗೀತೆಗಳು ಕವನ ಸಂಕಲನ ಲೊಕಾರ್ಪಣಾ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಪರಮೇಶ್ವರ ಜಿ. ಹೆಗಡೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಗೀತಾ ಎನ್. ಅವರು ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು, ಛಂದೋಬದ್ಧ ಕವನಗಳನ್ನು ಷಟ್ಪದಿಗಳನ್ನು ಬರೆದಿರುವುದಲ್ಲದೆ, ಕಿಶೋರ ಗೀತೆಗಳನ್ನು ಪ್ರಕಟಿಸಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ್ದ ಉಪನ್ಯಾಸಕ ವಿಶ್ವನಾಥ್ ಶುಭ ಹಾರೈಸಿದರು. ಕೃತಿ ಕುರಿತು ಮುನ್ನುಡಿ ಬರೆದಿರುವ ಆಂಗ್ಲ ಭಾಷಾ ಉಪನ್ಯಾಸಕ, ಸಾಹಿತಿ ರಾಧೇಶ ತೋಳ್ಪಾಡಿ ಮಾತನಾಡಿ, ಮಕ್ಕಳ ಕವಿತೆಗೆ ವಿಶೇಷ ಸ್ಥಾನಮಾನಗಳಿದ್ದು, ಮಕ್ಕಳ ಜೊತೆ ಹೆಚ್ಚು ಒಡನಾಡುವ ಮಹಿಳೆಯರ ದನಿ ಮಕ್ಕಳ ಕವಿತೆಗಳ ಕ್ಷೇತ್ರದಲ್ಲಿ ವಿರಳವಾಗುತ್ತಿರುವ ಹೊತ್ತಿನಲ್ಲಿ ಡಾ. ಗೀತಾ ಎನ್. ಅವರ ಕೃತಿ ಬಂದದ್ದು ಸಂತಸದ ಸಂಗತಿ. ತಾಯ ಮಮತೆಯಿಂದ ಇಡಿ ಲೋಕವನ್ನು ತನ್ನ ಮಗುವೆಂಬಂತೆ ನೋಡುವ ಡಾ. ಗೀತಾ ಎನ್. ಅವರ ಪಕ್ವ ಮನದಿಂದ ಇಲ್ಲಿ ಅಕ್ಕರೆಯ ಸಾಲುಗಳು ಮುಡಿಬಂದಿವೆ ಎಂದರು.
ಪವಿತ್ರಾ ಮಯ್ಯ ಮತ್ತು ಬಳಗದವರಿಂದ ಭಾವಗೀತೆ ಮತ್ತು ಕಿಶೋರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಪಾಣೆಮಂಗಳೂರು ಬೊಂಡಾಲದ ಪರ್ಲಮಜಲಿನ ಶ್ರೀ ದುರ್ಗಾ ಕಲಾರಾಧನಾ ಬಳಗದ ವತಿಯಿಂದ ಲೇಖಕಿಯನ್ನು ಸನ್ಮಾನಿಸಲಾಯಿತು.
ಮಾಧವ ರಾವ್ ಎನ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾಸ್ಕರ ರಾವ್ ಪರ್ಲಮಜಲು ವಂದಿಸಿದರು. ಹೇಮಾ ರವಿಚಂದ್ರ ಮಯ್ಯ ಪಾಣೆಮಂಗಳೂರು ಕಾರ್ಯಕ್ರಮ ನಿರ್ವಹಿಸಿದರು.