ವಿಟ್ಲ ಜಂಕ್ಷನ್ ಬಳಿ ಮಂಗಳೂರು ರಸ್ತೆ ಬದಿಯ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಸುತ್ತಲಿನ ಮಳಿಗೆಗಳಿಗೂ ವ್ಯಾಪಿಸಿ, ಸುಮಾರು 6 ಅಂಗಡಿಗಳು ಸುಟ್ಟು ಹೋದ ಘಟನೆ ಬುಧವಾರ ರಾತ್ರಿ ನಡೆದಿದೆ.
ವಿಟ್ಲ ಕಲ್ಲಡ್ಕ ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ಶ್ರೀ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೇ ಸಂಪೂರ್ಣ ಅಂಗಡಿಯನ್ನು ಆಹುತಿ ಪಡೆದುಕೊಂಡಿದ್ದು, ಹತ್ತಿರದ ಅಮಿತ್ ಹೋಟೆಲ್, ಗಣೇಶ್ ಡ್ರೈವಿಂಗ್ ಸ್ಕೂಲ್ ಅಂಗಡಿ ಕಟ್ಟಡಗಳೂ ಬೆಂಕಿಗಾಹುತಿಯಾಗಿದೆ.
ಅಂಗಡಿಯ ಪಕ್ಕದ ಟೈಲರಿಂಗ್ ಶಾಪ್, ಡ್ರೈವಿಂಗ್ ಸ್ಕೂಲ್, ವೈನ್ ಶಾಪ್, ಫಾಸ್ಟ್ ಫುಡ್ ಮಳಿಗೆ, ಹೋಟೆಲ್ ಗೆ ಬೆಂಕಿ ಅನಾಹುತದಿಂದ ಹಾನಿಯಾಗಿದೆ.
ರಾತ್ರಿ 9 ಗಂಟೆ ವೇಳೆ ಅಂಗಡಿಯಲ್ಲಿ ಬೆಂಕಿ ಉರಿಯುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ನಂದಿಸುವ ಕಾರ್ಯ ಆರಂಭಿಸಿದರು. ಬಂಟ್ವಾಳದಿಂದ ಹಾಗೂ ಪುತ್ತೂರಿನಿಂದ ಅಗ್ನಿಶಾಮಕ ವಾಹನ ಆಗಮಿಸಿ ಕಾರ್ಯಾಚರಣೆ ನಡೆಸಿತು. ರಾತ್ರಿ 12ರವರೆಗೂ ನಡೆದ ಕಾರ್ಯಾಚರಣೆಯ ಬಳಿಕ ಬೆಂಕಿ ನಂದಿತು.