ಬಂಟ್ವಾಳ: ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ, ಭರತನಾಟ್ಯ ಸಂಸ್ಥೆಯ ರಜತ ಕಲಾ ಯಾನ ಸರಣಿ ಕಾರ್ಯಕ್ರಮದ ಅಂಗವಾಗಿ ಬಿ.ಸಿ.ರೋಡಿನ ಸ್ಪರ್ಶಕಲಾಮಂದಿರದಲ್ಲಿ ಕಲಾಪರ್ವ-2025 ಕಾರ್ಯಕ್ರಮ ನಡೆಯಿತು.
ಕಲಾ ಸಂಸ್ಥೆಯ ಬಿ.ಸಿ. ರೋಡ್ ಮತ್ತು ಕಲ್ಲಡ್ಕ ಶಾಖೆಗಳ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಅಂಡ್ ಕಲ್ಚರ್, ಪುತ್ತೂರಿನ ನಿರ್ದೇಶಕಿಯಾದ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಕಾರ್ಯಕ್ರಮ ಉದ್ಘಾಟಿಸಿ, ನೃತ್ಯ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸುವುದರೊಂದಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
ಪ್ರಾಸ್ತಾವಿಕ ಮಾತುಗಳ ಮೂಲಕ ಕಲಾ ಸಂಸ್ಥೆಯ 25 ವರ್ಷಗಳ ನೃತ್ಯ ಪಯಣವನ್ನು ವಿದುಷಿ ವಿದ್ಯಾ ಮನೋಜ್ ತೆರೆದಿಟ್ಟರು. ಹಿಮ್ಮೇಳ ಕಲಾವಿದರಾಗಿ ನಟುವಾಂಗ ಹಾಗೂ ನೃತ್ಯ ನಿರ್ದೇಶನದಲ್ಲಿ ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣ ಆಚಾರ್ಯ ಪಾಣೆಮಂಗಳೂರು ಮತ್ತು ವಿದುಷಿ ಡಾ. ಶ್ರೀದೇವಿ ಕಲ್ಲಡ್ಕ, ಮೃದಂಗ ವಾದನದಲ್ಲಿ ವಿದ್ವಾನ್ ಗೀತೇಶ್ ಎ.ಜಿ. ನೀಲೇಶ್ವರ, ಕೊಳಲು ವಾದನದಲ್ಲಿ ಎ. ಎಸ್. ಹರಿಪ್ರಸಾದ್ ನೀಲೇಶ್ವರ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿ, ನಯನ ವಂದಿಸಿದರು.