ಬಂಟ್ವಾಳ: ಭಾರತವನ್ನು ಬೆಳಗಿಸುವ ಅಪೂರ್ವವಾದ ಗೀತೆ ವಂದೇ ಮಾತರಂ. 150 ವರ್ಷಗಳ ಇತಿಹಾಸವಿರುವ ಈ ಗೀತೆಯ ಹಿನ್ನಲೆಯಲ್ಲಿ ನಾವು ರಾಷ್ಟವನ್ನು ಕಟ್ಟಬೇಕು. ರಾಷ್ಟ್ರಕಟ್ಟಲು ನಾವು ಯಾಕೆ ಸೋತೆವೆಂದರೆ ನಾವು ಇತಿಹಾಸವನ್ನು ಮರೆತಿದ್ದೇವೆ. ಇತಿಹಾಸ ಬರೆಯುವುದಕ್ಕಿಂತ ಇತಿಹಾಸ ನಿರ್ಮಿಸಬೇಕು. ಬಂಕಿಮಚಂದ್ರರು ಅದ್ಭುತವಾದ ಗೀತೆ ಬರೆದು ಇತಿಹಾಸ ಸೃಷ್ಟಿಸಿದರು ಎಂದು ಮುಕ್ಕ ಶ್ರೀನಿವಾಸ ಯುನಿವರ್ಸಿಟಿಯ ಸಂಸ್ಕೃತ ವಿಭಾಗದ ಸಂಶೋಧನಾ ಮಾರ್ಗದರ್ಶಕ ಡಾ. ಸೋಂದಾ ಭಾಸ್ಕರ ಭಟ್ ಹೇಳಿದರು.
ಬಿ. ಸಿ.ರೋಡಿನ ಶಮ್ಯಾಪ್ರಾಸದಲ್ಲಿ ನಡೆದ ಸರಿದಂತರ ಗೌರವ ಪುರಸ್ಕಾರ ಸಮಾರಂಭದಲ್ಲಿ ‘ಭಾರತದ ಆತ್ಮಶಕ್ತಿ ವಂದೇ ಮಾತರಂ’ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಬಿ.ಸಿ.ರೋಡಿನ ವೈದ್ಯ ಡಾ. ಸತ್ಯಶಂಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜ ಸೇವೆ ಮಾಡುವವರಿಗೆ ಕುಹಕದ ಮಾತುಗಳು ಸಾಮಾನ್ಯ ಅವುಗಳನ್ನು ಎದುರಿಸಿಕೊಂಡು ಮುನ್ನಡೆಯುವುದೇ ನಿಜವಾದ ಸಾಧನೆ ಎಂದರು.
ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಎಸ್. ಈಶ್ವರ ಭಟ್ ಅವರಿಗೆ ‘ಸರಿದಂತರ ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು.
ಪ್ರಕಾಶನದ ಸಂಚಾಲಕ ಪ್ರೊ.ರಾಜಮಣಿ ರಾಮಕುಂಜ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಉಷಾ ಕಾರಂತ ಪ್ರಾರ್ಥಿಸಿ, ಸಂಜನಾ ರಾವ್ ವಂದೇ ಮಾತರಂ ಗೀತೆ ಹಾಡಿದರು.
ಭಾರತೀ ರಾಜಮಣಿ ಸನ್ಮಾನ ಪತ್ರ ವಾಚಿಸಿ, ಮೇಧಾ ರಾಮಕುಂಜ ವಂದಿಸಿದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ೫ನೇ ತರಗತಿಯ ವಿದ್ಯಾರ್ಥಿನಿ ಸುಮೇಧಾ ಸೋಮಯಾಜಿ ಬೆಂಗಳೂರು ಅವರಿಂದ ಗಮಕ ವಾಚನ ನಡೆಯಿತು