BEO OFFICE BANTWAL
ಶಾಲೆ ಆರಂಭವಾಗಿ ಅರ್ಧ ವರ್ಷ ಕಳೆದರೂ, ಅನುದಾನ ವಿಳಂಬದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯದ ಕೆಲ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್, ಪಾದರಕ್ಷೆ ಇನ್ನೂ ಸಿಕ್ಕಿಲ್ಲ. ಶೇಕಡಾ 40 ಅಥವಾ ಶೇಕಡಾ 20ರಷ್ಟು ಮಾತ್ರ ಹಣ ಬಂದಿರುವುದರಿಂದ ಪೂರ್ಣ ಪ್ರಮಾಣದ ಖರೀದಿ ಸಾಧ್ಯವಾಗುತ್ತಿಲ್ಲ. ಶೀಘ್ರ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುತ್ತಿದ್ದರೂ ಇನ್ನೂ ಬಂದಿಲ್ಲ.
BEO OFFICE BANTWAL
ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕೊಂದರಲ್ಲೇ, 194 ಪ್ರಾಥಮಿಕ, 39 ಸರಕಾರಿ ಹೈಸ್ಕೂಲ್ ಗಳಿವೆ. ಇವುಗಳಲ್ಲಿ 90 ಪ್ರಾಥಮಿಕ, 30 ಹೈಸ್ಕೂಲಿಗೆ ಬಂದಿಲ್ಲ ಪೂರ್ಣ ಪ್ರಮಾಣದ ಹಣ ಬಂದಿಲ್ಲ. ಇದೇ ರೀತಿ ರಾಜ್ಯದ ಹಲವೆಡೆ ಸಮಸ್ಯೆಗಳು ತಲೆದೋರಿವೆ. ಆಗಸ್ಟ್ ನಲ್ಲಿ ಕೊಡಬೇಕಾದ ಹಣವನ್ನು ನವೆಂಬರ್ ನಲ್ಲಿ ಪಾವತಿಸಲಾಗಿತ್ತು. ಆದರೆ ಅಲ್ಲೂ ಪೂರ್ಣಪ್ರಮಾಣದ ಹಣ ಪಾವತಿಯಾಗದ ಕಾರಣ ವಿತರಕರೂ ತೊಂದರೆ ಅನುಭವಿಸುವಂತಾಯಿತು. ಶಾಲೆಗಳ ಅಕೌಂಟ್ ಗೆ ಶೇ.100ರಷ್ಟು ಹಣ ಬಾರದೇ ಇರುವ ಕಾರಣ ಚಪ್ಪಲಿ ವಿತರಿಸಲು ಡೀಲರ್ ಗಳು ಹಿಂದೇಟು ಹಾಕುತ್ತಾರೆ.
1-5ನೇ ತರಗತಿಯ ವಿದ್ಯಾರ್ಥಿಗಳಿಗೆ 265 ರೂ., 6-8ನೇ ತರಗತಿಗೆ 295 ರೂ. ಮತ್ತು 9-10ನೇ ತರಗತಿಗೆ 325 ರೂ. ಹಣ ನಿಗದಿಯಾಗಿದೆ. ಇವುಗಳನ್ನು ಒದಗಿಸಲು ಸರಕಾರ ಮೀನಮೇಷ ಎಣಿಸುತ್ತಿದೆ. ಅಷ್ಟರಾಗಲೇ ಡಿಸೆಂಬರ್ ಕೊನೇ ವಾರ ಬಂದಿದೆ.
ಶೂ, ಸಾಕ್ಸ್ ಅಥವಾ ಪಾದರಕ್ಷೆ ಖರೀದಿಗೆಂದು ಶಿಕ್ಷಣ ಇಲಾಖೆ ಕೆಲ ಶಾಲೆಗಳಿಗೆ ಶೇ. 40ರಷ್ಟು, ಕೆಲ ಶಾಲೆಗಳಿಗೆ ಶೇ. 20ರಷ್ಟು ಹಣವನ್ನು ಆನ್‌ಲೈನ್‌ಮೂಲಕ ಎಸ್‌ಡಿಎಮ್‌ಸಿ ಖಾತೆಗೆ ಜಮಾ ಮಾಡಲಾಗಿದೆ. ಬಂದ ಹಣದಲ್ಲಿ ಕೆಲವರಿಗಷ್ಟೇ ಕೊಡಿಸಿದರೆ ತಾರತಮ್ಯ ಮಾಡಿದಂತಾಗುತ್ತದೆ. ಪೂರ್ಣ ಪ್ರಮಾಣ ಅನುದಾನ ಸಿಕ್ಕರೆ ಮಾತ್ರ ಶೂ, ಸಾಕ್ಸ್‌ಖರೀದಿಸಲು ಸಾಧ್ಯವಿದೆ. ಹೀಗಾಗಿ ಸರಕಾರ ಮಂಜೂರು ಮಾಡಿದ ಅನುದಾನ ಬ್ಯಾಂಕ್‌ನಲ್ಲೇ ಇರುವಂತಾಗಿದೆ. ಪೂರ್ಣ ಹಣ ಕೊಡದೆ ವಿತರಕರೂ ಚಪ್ಪಲಿಯನ್ನು ಒದಗಿಸಲು ಹಿಂದೇಟು ಹಾಕುತ್ತಾರೆ.
ಸಮಸ್ಯೆ ಏನು?
ಆಗಷ್ಟ್ ಮಧ್ಯಭಾಗದಲ್ಲೇ ಹಣಕಾಸಿನ ನೆರವು ಬರಬೇಕಿತ್ತು. ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಲೆಕ್ಕಶೀರ್ಷಿಕೆಯಲ್ಲಿ ಮೂರು ವಿಭಾಗಗಳಲ್ಲಿ ನೇರವಾಗಿ ಆನ್ ಲೈನ್ ಮೂಲಕ ಎಚ್.ಎಂ ಮತ್ತು ಎಸ್.ಡಿ.ಎಂ.ಸಿ. ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಎಸ್.ಸಿ, ಎಸ್.ಟಿ. ಮತ್ತು ಸಾಮಾನ್ಯ ವಿಭಾಗದ ಮಕ್ಕಳಿಗೆ ಪ್ರತ್ಯೇಕವಾಗಿ ಹಣವನ್ನು ಜಮಾ ಮಾಡಲಾಗುತ್ತದೆ. ಇಲ್ಲೇ ಸಮಸ್ಯೆ ಉದ್ಭವವಾಗಿದೆ. ಕೆಲವು ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಹಣ ಬಂದಿದ್ದರೆ, ಕೆಲವು ಕಡೆ ಸಾಮಾನ್ಯ, ಕೆಲವೆಡೆ ಎಸ್.ಸಿ, ಎಸ್.ಟಿ. ಖಾತೆಗಳಿಗೆ ಮಾತ್ರ ಹಣ ಬಿದ್ದಿದೆ. ಪೂರ್ಣ ಹಣ ಬಾರದೆ ವಿತರಕರಲ್ಲಿ ಚಪ್ಪಲಿ ಖರೀದಿಸಲು ಕೋರಿದರೆ, ಅವರಿಗೂ ಹಣ ಬರುವ ಧೈರ್ಯ ಇರದ ಕಾರಣ ಸಮಸ್ಯೆಯಾಗುತ್ತದೆ. ಹೀಗಾಗಿ ಬಂದ ಹಣ ಅಕೌಂಟ್ ನಲ್ಲೇ ಉಳಿದಿದೆ. ಪೂರ್ಣ ಹಣ ಬಾರದೆ ವಿತರಣೆಗೂ ತೊಡಕು. ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಾಲಾ ಮಕ್ಕಳು ಕಳೆದ ವರ್ಷ ಕೊಟ್ಟ ಚಪ್ಪಲನ್ನೇ ಹಾಕಿಕೊಂಡು ಬರುತ್ತಿದ್ದಾರೆ.
ಕಳೆದ ತಿಂಗಳು ಈ ಸಮಸ್ಯೆ ಇತ್ತು. ಆದರೆ ಈಗ ಸಮಸ್ಯೆ ಸಾಕಷ್ಟು ಬಗೆಹರಿದಿದೆ. ತಾಂತ್ರಿಕ ಕಾರಣಗಳಿಂದ ಕೆಲವೆಡೆ ಇಂಥ ಸಮಸ್ಯೆ ಇರಬಹುದು. ತಿಂಗಳ ಹಿಂದೆ ಶೇ.50ರಷ್ಟು ಹಣ ಜಮಾ ಆಗಿತ್ತು. ನಾವು ಇಲಾಖಾ ಆಯುಕ್ತರ ಗಮನಕ್ಕೆ ತಂದ ಬಳಿಕ ಈಗ ಸಮಸ್ಯೆ ಬಹುತೇಕ ಪರಿಹಾರವಾಗಿದೆ. ಕೆಲವೊಂದು ಕಡೆ ಬಾಕಿ ಇರುವುದೂ ಸರಿಯಾಗಲಿದೆ.
-ಚಂದ್ರಶೇಖರ್ ನುಗ್ಗಲಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳಿಗೆ ಇಂಥ ಸಮಸ್ಯೆ ಇದೆ. ಕೆಲವು ಶಾಲೆಗಳಲ್ಲಿ ಹಣ ಬರುವ ಮೊದಲೇ ಡೀಲರ್ ಗಳು ಚಪ್ಪಲಿ ವಿತರಿಸಿದ ಕಾರಣ ಮಕ್ಕಳಿಗೆ ತೊಂದರೆ ಆಗಿಲ್ಲ. ಆದರೆ ಹೆಚ್ಚಿನ ಕಡೆ ಪೂರ್ಣಾಂಶ ಹಣ ಬಾರದೇ ಇರುವ ಕಾರಣ ಮಕ್ಕಳಿಗೆ ಪಾದರಕ್ಷೆ ವಿತರಣೆ ಆಗಿಲ್ಲ. ಈ ಕುರಿತು ನಾವು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ.
-ಶಿವಪ್ರಸಾದ್ ಶೆಟ್ಟಿ, ಜಿಲ್ಲಾಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದಕ್ಷಿಣ ಕನ್ನಡ ಜಿಲ್ಲೆ.
ಬಂಟ್ವಾಳ ತಾಲೂಕಿನ ಕೆಲವು ಶಾಲೆಗಳಿಗೆ ಎಲ್ಲ ಲೆಕ್ಕಶೀರ್ಷಿಕೆಗಳ ಹಣ ಬರಲಿಲ್ಲ ಎಂಬ ವಿಚಾರವನ್ನು ಈಗಾಗಲೇ ಕೆಡಿಪಿ ಸಭೆಯಲ್ಲಿ ಮಂಡಿಸಿದ್ದೇನೆ. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ.
-ಮಾಲತಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ
ಪ್ರತಿ ವರ್ಷವೂ ಸ್ವಾತಂತ್ರ್ಯೋತ್ಸವ ವೇಳೆ ಪಾದರಕ್ಷೆಗಳನ್ನು ನಮ್ಮ ಹೈಸ್ಕೂಲಿನಲ್ಲಿ ವಿತರಿಸಲಾಗುತ್ತಿತ್ತು. ಆದರೆ ಈ ವರ್ಷ ಬಹಳ ತಡವಾಗಿದ್ದು, ಶೈಕ್ಷಣಿಕ ವರ್ಷಾಂತ್ಯ ತಲುಪುತ್ತಿದ್ದರೂ ಅನುದಾನ ಬಾರದೆ ವಿತರಿಸಲು ಕಷ್ಟಸಾಧ್ಯವಾಗುತ್ತಿದೆ ಎನ್ನಲಾಗುತ್ತಿದೆ. ಕೂಡಲೇ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುತ್ತೇನೆ.
-ಕೇಶವ ದೈಪಲ, ಕಾರ್ಯಾಧ್ಯಕ್ಷರು, ಎಸ್.ಡಿ.ಎಂ.ಸಿ. ಬಿ.ಮೂಡ ಸರಕಾರಿ ಹೈಸ್ಕೂಲ್.