ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಕಂಬಳದ ಕುರಿತು ಮಾಹಿತಿ ನೀಡಿದ ಅವರು, ‘ಡಿ.27 ರಂದು ಬೆಳಿಗ್ಗೆ 8.30ಕ್ಕೆ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಕೆ. ಚಿತ್ತರಂಜನ್ ಅವರು ಈ ಬಾರಿಯ ಮಂಗಳೂರು ಕಂಬಳವನ್ನು ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಉದ್ಘಾಟಿಸಲಿದ್ದಾರೆ. ಕಂಬಳವು ಕರಾವಳಿಯ ಸಂಸ್ಕೃತಿಯ ವಿಶಿಷ್ಟತೆಯ ಪ್ರತೀಕ. ಆದರೆ ನಮ್ಮ ಕಂಬಳದ ಅಸ್ಮಿತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆದಾಗ ಅದರ ವಿರುದ್ದ ಸಿಡಿದೆದ್ದು ಆರಂಭವಾದ ಸಣ್ಣ ಪ್ರಯತ್ನವೇ ಮಂಗಳೂರು ಕಂಬಳವಾಗಿ ಕಳೆದ 9 ವರ್ಷಗಳಿಂದ ಸಂಭ್ರಮದ ಕೂಟವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಡಿ.27ರಂದು ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಜಿ. ಗ್ರೂಪ್ ನ ಸಿ.ಎಂ.ಡಿ ಹಾಗೂ ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಡಾ.ಕೆ. ಪ್ರಕಾಶ್ ಶೆಟ್ಟಿ ವಹಿಸಲಿದ್ದಾರೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಸೇರಿದಂತೆ ನಮ್ಮ ಶಾಸಕರು, ಸಂಸದರು, ಮಾಜಿ ಶಾಸಕರು, ಧಾರ್ಮಿಕ -ಸಾಮಾಜಿಕ ಹೀಗೆ ವಿವಿಧ ಕ್ಷೇತ್ರದ ಮುಖಂಡರು, ಉದ್ಯಮಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಕ್ಯಾ. ಚೌಟ ಮಾಹಿತಿ ನೀಡಿದ್ದಾರೆ.
ಮಂಗಳೂರು ಈಗಾಗಲೇ ‘ಕ್ಲೀನ್ ಮತ್ತು ಸೇಫ್ ಸಿಟಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಶಿಸ್ತನ್ನು ನಮ್ಮ ಕಂಬಳದ ವೇದಿಕೆಯಲ್ಲೂ ಮುಂದುವರಿಸಿ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿಯಾದ ಕಂಬಳ ಆಯೋಜನೆಗೆ ಪ್ರಯತ್ನ ಮಾಡಲಾಗುವುದು. ಈ ಬಾರಿಯ ಕಂಬಳದಲ್ಲಿ 160ರಿಂದ 170 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ನವ ವರ್ಷ – ನವ ವಿಧ ಪರಿಕಲ್ಪನೆ
ಮಂಗಳೂರು ಕಂಬಳಕ್ಕೆ ಒಂಬತ್ತು ವರ್ಷಗಳ ಸಂಭ್ರಮಾಚರಣೆಯಾಗಿರುವ ಹಿನ್ನಲೆಯಲ್ಲಿ ನವ ವರ್ಷ -ನವವಿಧ ಪರಿಕಲ್ಪನೆಯಡಿ ಈ ಕಂಬಳ ಕೂಟವನ್ನು ಆಯೋಜಿಸಲಾಗಿದೆ. ಐದು ಚಟುವಟಿಕೆ ಹಾಗೂ ನಾಲ್ಕು ಸ್ಪರ್ಧೆಗಳು ನಡೆಯಲಿರುವುದು ಈ ಬಾರಿಯ ಕಂಬಳದ ವಿಶೇಷತೆ.
ರಾಣಿ ಅಬ್ಬಕ್ಕ ಚರಿತ್ರೆಯ ಚಿತ್ರಕಲಾ ಪ್ರದರ್ಶನ:
ತುಳುನಾಡಿನ ಹೆಮ್ಮಯ ವೀರ ವನಿತೆ ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠದ ಸಹಯೋಗದೊಂದಿಗೆ ಆಕೆಯ ಶೌರ್ಯಗಾಥೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ” ರಾಣಿ ಅಬ್ಬಕ್ಕ ಚರಿತ್ರಾ ಚಿತ್ರಕಲಾ ಪ್ರದರ್ಶನʼ ಆಯೋಜಿಸಲಾಗಿದೆ.
ವಂದೇ ಮಾತರಂ 150: ಕಂಬಳ ಉದ್ಘಾಟನೆ ವೇಳೆ ವಂದೇ ಮಾತರಂ ಗೀತೆಗೆ 150ನೇ ವರ್ಷದ ಸವಿನೆನಪಿಗೆ ಒಟ್ಟು 150 ವಿದ್ಯಾರ್ಥಿನಿಯರಿಂದ ವಂದೇ ಮಾತರಂ ಸಮೂಹ ಗಾಯನ ಕೂಡ ನಡೆಯಲಿದೆ.
ಏಕ್ ಪೆಡ್ ಮಾ ಕೆ ನಾಮ್: ಪ್ರಧಾನಿ ನರೇಂದ್ರ ಮೋದಿಯವರ ಪರಿಸರ ಸಂರಕ್ಷಣೆಯ ಪರಿಕಲ್ಪನೆಯಂತೆ ಕಂಬಳದಲ್ಲಿ ಗಿಡಗಳ ವಿತರಣೆ.
ಬ್ಯಾಕ್ ಟು ಊರು ಉದ್ಯಮಿಗಳಿಗೆ ಗೌರವ: ದೇಶ- ವಿದೇಶದಲ್ಲಿ ಯಶಸ್ವಿಯಾದ ಮಂಗಳೂರಿಗರು ’ಬ್ಯಾಕ್ ಟು ಊರು’ ಎನ್ನುವ ವಿಶಿಷ್ಟ ಪರಿಕಲ್ಪನೆಯಡಿ ಊರಿಗೆ ವಾಪಾಸ್ಸಾಗಿ ನಮ್ಮೂರಿನಲ್ಲಿಯೇ ಉದ್ಯಮ ಸ್ಥಾಪಿಸಿರುವ 9 ಮಂದಿ ಉದ್ಯಮಿಗಳಿಗೆ ಸನ್ಮಾನ.
ಮಂಗಳೂರಿನ ವೃದ್ಧಾಶ್ರಮದ ಹಿರಿಯ ಚೇತನರೊಂದಿಗೆ ಕಂಬಳ ಸಂಭ್ರಮ:
ಮಂಗಳೂರಿನ ವೃದ್ಧಾಶ್ರಮದ ಹಿರಿಯ ಚೇತನಗಳನ್ನು ಕಂಬಳ ಸಂಭ್ರಮಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಗುತ್ತಿದೆ. ಸಮಾಜವು ಸದಾ ನಿಮ್ಮೊಂದಿಗಿದೆ ಎನ್ನುವ ಮಮತೆಯ ಕಲ್ಪನೆಯಡಿ, ಹಿರಿಯರಿಗೆ ನಮ್ಮ ಸಂಸ್ಕೃತಿಯ ಕ್ರೀಡೆಯನ್ನು ಹತ್ತಿರದಿಂದ ನೋಡುವ ಅವಕಾಶ ನೀಡುವುದು ಇದರ ಉದ್ದೇಶ.
ಸ್ಪರ್ಧೆ:ರಂಗ್ ದ ಕೂಟ ಡ್ರಾಯಿಂಗ್ ಸ್ಪರ್ಧೆ: 10 ವರ್ಷದವರೆಗಿನ ಮಕ್ಕಳು ‘ರಂಗ್‌ದ ಎಲ್ಯ’, 10ರಿಂದ 15 ವರ್ಷದೊಳಗಿನ ಮಕ್ಕಳು ‘ರಂಗ್‌ದ ಮಲ್ಲ’ ವಿಭಾಗದಲ್ಲಿ
ಭಾಗವಹಿಸಬಹುದು. ಇನ್ನು ರಂಗ್ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ.
ಫೋಟೊಗ್ರಾಫಿ ಸ್ಪರ್ಧೆ: ಮಂಗಳೂರು ಕಂಬಳ ಫೋಟೊಗ್ರಾಫಿ ಸ್ಪರ್ಧೆಗೆ ನಗದು ಬಹುಮಾನ ನೀಡಲಾಗುವುದು.
ಎಐ ಕ್ರಿಯೇಟಿವ್ ಯೋಧ ಸ್ಪರ್ಧೆ: ಕೃತಕ ಬುದ್ಧಿಮತ್ತೆಯನ್ನು (AI) ಕ್ರಿಯಾತ್ಮಕವಾಗಿ ಬಳಸಿಕೊಂಡು ಮಂಗಳೂರು ಕಂಬಳದ ಗತ್ತನ್ನು ಪರಿಚಯಿಸಲಾಗುವುದು.ರೀಲ್ಸ್ ಸ್ಪರ್ಧೆ: ಸ್ಪರ್ಧಾಳುಗಳು ತಾವು ಸಿದ್ಧಪಡಿಸಿದ ರೀಲ್ಸ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ #mangalurukambala ಹ್ಯಾಶ್‌ಟ್ಯಾಗ್ ಬಳಸಿ, ಅಧಿಕೃತ ಖಾತೆಯೊಂದಿಗೆ Collaboration ಮಾಡಬೇಕು.
ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಕೆಂಗಿನಮನೆ, ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೋಡಿಕಲ್, ಸಂಜಯ್ ಪ್ರಭು, ಜೋಯಲೆಸ್ ಡಿಸೋಜ, ವಸಂತ್ ಜೆ. ಪೂಜಾರಿ, ನಂದನ್ ಮಲ್ಯ, ಅಜಿತ್ ಬೊಪಯ್ಯ, ಗುರುಚಂದ್ರ ಹೆಗಡೆ, ಅಭಿಷೇಕ್ ರೈ, ಈಶ್ವರ್ ಪ್ರಸಾದ್, ಸಾಕ್ಷತ್ ಶೆಟ್ಟಿ, ಪ್ರಕಾಶ್ ಗರೋಡಿ, ಸಂಚಲಕರಾದ ಸಂತ್ಯಾಗುತ್ತು ಸಚಿನ್ ಶೆಟ್ಟಿ, ಕಾರ್ಯದರ್ಶಿ ಅವಿನಾಶ್ ಸುವರ್ಣ, ಸುಜಿತ್ ಪ್ರತಾಪ್ ಮುಂತಾದವರು ಉಪಸ್ಥಿತರಿದ್ದರು