ನಮ್ಮೂರು

ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಕರ್ನಾಟಕ ಬಾಲಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ ಪ್ರದಾನ

| ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವ

ಜಾಹೀರಾತು

 ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಚ್ಚಿನದ ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಹೆಸರು ಕನ್ನಡ ಓದುಗ ಲೋಕಕ್ಕೆ ಚಿರಪರಿಚಿತ. ಸುಮಾರು 12 ಸಾವಿರಕ್ಕೂ ಅಧಿಕ ಲೇಖನ, ಬರೆಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಕ್ಕಳ ಸಾಹಿತ್ಯದಲ್ಲಂತೂ ಅವರ ಕೊಡುಗೆ ಅನನ್ಯ.

ಹೀಗಾಗಿಯೇ ಅವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಗಮನಿಸಿ ಬೆಳಗಾವಿಯ ಸುವರ್ಣಸೌಧ ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾ ಳ್ಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಇಲಾಖೆ ಮೂಲಕ ನೀಡಲಾಗುವ 2023-24ನೇ ಸಾಲಿನ ಬಾಲ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು

ತನ್ನ 11ನೇ ವಯಸ್ಸಿನಲ್ಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡವರು ಶಾಸ್ತ್ರಿಗಳು. 1964ರಿಂದಲೇ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಲೇಖನ, ಬರೆಹಗಳನ್ನು ಕಳುಹಿಸುತ್ತಿದ್ದರು. ಶಿಶು ಸಾಹಿತ್ಯದಿಂದ ಆರಂಭಗೊಂಡು, ಪ್ರವಾಸಿ ಕಥನದವರೆಗೆ.. ಅವರ ಬರೆಹಗಳ ವಿಷಯ ವೈವಿಧ್ಯಕ್ಕೆ ಇಂಥದ್ದೇ ಎಂಬ ಪರಿಮಿತಿ ಇಲ್ಲ. ಎಲ್ಲ ವಯೋಮಾನ, ಅಭಿರುಚಿಯವರಿಗೊಪ್ಪುವ ಬರವಣಿಗೆಯಿಂದಾಗಿಯೇ ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಗಮನ ಸೆಳೆದಿದ್ದಾರೆ.

ಪಠ್ಯಪುಸ್ತಕದಲ್ಲಿವೆ ಬರೆಹಗಳು:

ಮಹಾರಾಷ್ಟ್ರದ ಕನ್ನಡ ಶಾಲೆಗಳ 5. 6 ಮತ್ತು 7ನೇ ತರಗತಿ, ಕೇರಳದ ಎಂಟನೆಯ ತರಗತಿ ಹಾಗೂ ಮಂಗಳೂರು ವಿವಿ ಪಠ್ಯದಲ್ಲಿ ಇವರ ಕನ್ನಡ ಮತ್ತು ತುಳು ಕತೆಗಳು ಪಾಠವಾಗಿವೆ.

ಮಕ್ಕಳಿಗಾಗಿ 52 ಕಥಾ ಸಂಕಲನ, ಸಾಮಾಜಿಕ ಕಥಾ ಸಂಕಲನ, ಹಾಸ್ಯ ಲೇಖನ ಸಂಗ್ರಹ, ಜೀವನ ಚರಿತ್ರೆ, ವಯಸ್ಕರ ಶಿಕ್ಷಣಕ್ಕಾಗಿ ಪುಸ್ತಕಗಳು, ಮಹಿಳೆಯರಿಗಾಗಿ ಕೈಪಿಡಿ, ತುಳುವಿನಲ್ಲಿ ಪಣಿಯಾಡಿ ಪ್ರಶಸ್ತಿ ಪಡೆದ ಕಾದಂಬರಿ, ಕನ್ನಡ ಕಾದಂಬರಿ, ಗ್ರಾಮಾಭಿವೃದ್ಧಿ ಯೋಜನೆಗಾಗಿ ಕೈಪಿಡಿ, ಮಕ್ಕಳಿಗಾಗಿ ಭಾಗವತ, ವಿಜ್ಞಾನ ಪುಸ್ತಕ, ವೈಚಾರಿಕ ಲೇಖನಗಳ ಪುಸ್ತಕ, ಸಂಪಾದಿತ ಕೃತಿ, ಸ್ಮರಣ ಸಂಚಿಕೆ ಸಂಪಾದನೆ ಇತ್ಯಾದಿಗಳು ಸೇರಿ ನೂರಕ್ಕೂ ಅಧಿಕ ಪುಸ್ತಕಗಳು ಪ್ರಕಟವಾಗಿವೆ.  ವಿವಿಧ ಭಾಷೆಗಳಿಗೆ ಬರಹಗಳು ಅನುವಾದಗೊಂಡಿವೆ. ಆಕಾಶವಾಣಿ, ದೂರದರ್ಶನಗಳಲ್ಲೂ ಪ್ರಸಾರವಾಗಿದೆ. ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವಿಧ ಗೋಷ್ಠಿಗಳ ಅಧ್ಯಕ್ಷತೆ, ತಾಲೂಕು ಚುಟುಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ ಸಾಹಿತ್ಯ ಸೇವಕ, ಯಕ್ಷಗಾನ ಅರ್ಥಧಾರಿ, ಗಮಕ ವ್ಯಾಖ್ಯಾನಕಾರರೂ ಹೌದು.

ಕೇಂದ್ರ ಸರಕಾರದ ಪರಿಸರ ಇಲಾಖೆಯ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ಅಖಿಲ ಕರ್ನಾಟಕ ಮಕ್ಕಳ ಮೇಳದ ಗೌರವ, ಪಣಿಯಾಡಿ ಪ್ರಶಸ್ತಿ, ತುಳು ಅಕಾಡೆಮಿ, ತಾಲೂಕು ರಾಜ್ಯೋತ್ಸವ ಸಮಿತಿ, ಲಯನ್ಸ್, ರೋಟರಿ ಸಮ್ಮಾನ, ಆಶಾ ಸಾಲಿಯಾನ್ ಪ್ರತಿಷ್ಠಾನ ಗೌರವ, ಮಕ್ಕಳ ಸಾಹಿತ್ಯ ಸಂಗಮ, ಸಾಹಿತ್ಯ ಪರಿಷತ್ತಿನ ಮಸ್ತಕ ಪ್ರಶಸ್ತಿಗಳು, ಕಿನ್ನಿಗೋಳಿ ಕೊ. ಆ. ಉಡುಪ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಶಿವರಾಮ ಕಾರಂತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಅವರಿಗೆ ಸಂದಿವೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.