ಬಂಟ್ವಾಳ: ನಾವು ಕೂಡ ಮನುಷ್ಯರಂತೆ ಬದುಕಬೇಕು ಎಂದಿದ್ದರೆ ಭೂಮಿ ಬೇಕು. ನಮಗೆ ಭೂಮಿ ಮೊದಲು, ಅದಿಲ್ಲದಿದ್ದರೆ, ಏನೂ ಬೇಡ. ಕೊಡಲು ಆಗುವುದಿಲ್ಲ ಎಂದರೆ ಇಲ್ಲ ಎಂದು ಹೇಳಿ.. ಸುಮ್ಮನೇ ಭೂಮಿ ಕೊಡುತ್ತೇವೆ ಎಂದು ಪ್ರತಿ ಸಭೆಗಳಲ್ಲೂ ಹೇಳುವುದು ಯಾಕೆ?
ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಕೊರಗ ಸಮುದಾಯದ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಮುಖಂಡ ಸುಂದರ ಬೆಳುವಾಯಿ ಆಡಿದ ನೋವಿನ ಮಾತಿದು.
ಸರಕಾರದ ಸೌಲಭ್ಯ, ಸೌಕರ್ಯ ಪಡೆಯಬೇಕು ಎಂದಿದ್ದರೆ ಭೂಮಿ ಬೇಕು. ಭೂಮಿಯೇ ಇಲ್ಲದಿದ್ದರೆ ಏನು ಕೊಟ್ಟರೆ ಏನು ಪ್ರಯೋಜನ ಎಂದು ಹೇಳಿದ ಅವರು, ಜನಪ್ರತಿನಿಧಿಗಳೂ ಈ ಕುರಿತು ಅಧಿವೇಶನದಲ್ಲಿ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೀರಕಂಭ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಸಭೆಯ ಫಲಿತಾಂಶಗಳೇನು ಎಂದು ಪ್ರಶ್ನಿಸಿದ ಅವರು ಎಷ್ಟು ಮಂದಿಗೆ ಹಕ್ಕುಪತ್ರ ದೊರಕಿದೆ ಎಂದು ಪ್ರಶ್ನಿಸಿದರು. ಗ್ರಾಮದ ಮೂಲ ಮಂಜೂರುದಾರರಿಗೆ ಆರ್.ಟಿ.ಸಿ.ಆಗಿದೆ ಎಂದು ಕಂದಾಯ ಅಧಿಕಾರಿ ದಿವಾಕರ ಮುಗುಳ್ಯ ತಿಳಿಸಿದಾಗ, ಉಳಿದವರಿಗೆ ಏಕಿಲ್ಲ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳೇ ಜನರ ಬಳಿಗೆ ಹೋಗದಿದ್ದರೆ, ಯಾವುದೇ ಸಭೆ ನಡೆಸಿ ಪ್ರಯೋಜನವಿಲ್ಲ ಎಂದರು.
ಈ ಸಂದರ್ಭ ತಾಪಂ ಇಒ ಸಚಿನ್ ಕುಮಾರ್ ಅವರೂ ಅನುಮೋದಿಸಿ, ವಿಟ್ಲದಲ್ಲಿ ಜನವರಿ 15ರೊಳಗೆ ಸುತ್ತಮುತ್ತಲಿನ ಗ್ರಾಮಗಳ ಸಮುದಾಯದವರ ಸಭೆಯನ್ನು ಕರೆಯಲಾಗುವುದು ಎಂದರು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖಾಧಿಕಾರಿ ವಿನಯ ಕುಮಾರಿ ಉಪಸ್ಥಿತರಿದ್ದರು.