ಬಂಟ್ವಾಳ: ಪುದು,ಕೊಡ್ಮಾಣ್,ಕಳ್ಳಿಗೆ, ತುಂದೆ, ಅರ್ಕುಳ ಮತ್ತು ಮೇರಮಜಲು ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಮೂರು ವರ್ಷಗಳಿಗೊಮ್ಮೆ ಪ್ರತಿ ಮನೆ ಮನಗಳಲ್ಲಿ ರಾಮ ನಾಮದ ಅನುರಣನೆಯೊಂದಿಗೆ ಭಕ್ತಿಯ ಮೂಲಕ ಶಕ್ತಿಯ ಜಾಗೃತಿಗಾಗಿ ನಡೆಯುವ ಶ್ರೀ ರಾಮ ನಾಮ ತಾರಕ ಜಪ ಯಜ್ಞವು ಈ ಬಾರಿ ತಾಲೂಕಿನ ಪುದು -ಕಳ್ಳಿಗೆ ಗ್ರಾಮದ ನೆತ್ತರಕೆರೆಯಲ್ಲಿ ಶ್ರದ್ದಾ ಭಕ್ರಿಯೊಂದಿಗೆ ನಡೆಯಲಿದೆ
ಹೇಗೆ ನಡೆಯುತ್ತದೆ?
ಹಿಂದು ಬಾಂಧವರು ಯಾಗದ ಪೂರ್ವಭಾವಿಯಾಗಿ 48 ದಿನಗಳಲ್ಲಿ ಶ್ರೀರಾಮ ನಾಮ ತಾರಕ ಮಂತ್ರವನ್ನು ಜಪಿಸಿಕೊಂಡು, ಯಾಗದಲ್ಲಿ ತಾವೇ ಹವಿಸ್ಸನ್ನು ಸಮರ್ಪಿಸುವ ಮೂಲಕ ಈ ಕಾರ್ಯ ನಡೆಯುತ್ತದೆ. ಪರಿಸರದ ಮನೆಗಳಲ್ಲಿ ಜೊತೆ ಸೇರಿ ದಿನಕ್ಕೊಂದು ಮನೆಯಲ್ಲಿ ನಾಮಜಪ ಮಾಡಿಕೊಂಡು ನಮ್ಮ ಸನಾತನ ಸಂಸ್ಕೃತಿಯ ಆಚಾರ, ವಿಚಾರಗಳನ್ನು ತಿಳಿಯುವ ಮೂಲಕ ಕೌಟುಂಬಿಕ ಮೌಲ್ಯಗಳ ಬಲವರ್ಧನೆ ಇದರಿಂದ ಸಾಧ್ಯವಾಗುತ್ತದೆ. ಸಾಮೂಹಿಕವಾಗಿ ನಡೆಸುವ 48 ದಿನಗಳ ಅನುಷ್ಠಾನದಿಂದ ಪರಸ್ಪರ ನಾಗರಿಕ ಶಿಷ್ಟಾಚಾರಗಳ ಬಗ್ಗೆ ಮಾಹಿತಿ ವಿನಿಮಯ ಹಾಗೂ ಹಿಂದು ಸಮಾಜಕ್ಕೆ ಒಳಿತು, ರಾಷ್ಟ್ರಕಾರ್ಯಕ್ಕೆ ಅಳಿಲುಸೇವೆಯಾದಂತೆ, ಶ್ರೀರಾಮನ ಆದರ್ಶ ಪಾಲಿಸುವ ಮೂಲಕ ಸಾಕಾರವಾಗಬೇಕು, ಸ್ವದೇಶಿ ಆಚರಣೆ, ಸ್ವದೇಶಿ ಬಳಕೆ, ಸಾಮರಸ್ಯದ ಮನೋಭಾವದ ಜಾಗೃತಿ ಹಾಗೂ ದುಷ್ಚಟಮುಕ್ತವಾಗಬೇಕು ಎಂಬುದು ಯಾಗದ ಉದ್ದೇಶವಾಗಿದೆ.
PRESS MEET
ನೆತ್ತರಕೆರೆಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿಯ ಸಂಯೋಜಕ ತೇವು ತಾರಾನಾಥ ಕೊಟ್ಟಾರಿ , ಶನಿವಾರ ಸಂಜೆ 7ರಿಂದ ಪಂಚಗವ್ಯಾದಿ, ಮಂಟಪ ಶುದ್ಧಿ, ಅರಣಿ ಮಥನ, ಅಗ್ನಿ ಜನನ ವೈದಿಕ ಕಾರ್ಯಕ್ರಮ ನಡೆಯಲಿದ್ದು,ಆದಿತ್ಯವಾರ ಬೆಳಿಗ್ಗೆ ಗಂಟೆ 6-00ರಿಂದ ಗಣಪತಿ ಹೋಮ,ಧ್ವಜಾರೋಹಣ, ಗೋಪೂಜೆ ನಡೆದು,ಶ್ರೀ ರಾಮ ನಾಮ ತಾರಕ ಜಪ ಯಜ್ಞ ಪ್ರಾರಂಭಗೊಂಡು11ಕ್ಕೆ ಪೂರ್ಣಾಹುತಿಯಾಗಿ ಮಂಗಳಾರತಿ ಬಳಿಕ ನಡೆಯುವ ಸುಧರ್ಮ ಸಭೆಯಲ್ಲಿ ಅಖಿಲ ಭಾರತ ಗ್ರಾಮ ವಿಕಾಸ ಟೋಳಿ ಸದಸ್ಯ ರಮೇಶ್ ಹೊಸು ಇವರು ದಿಕ್ಸುಚಿ ಭಾಷಣ ಮಾಡಲಿದ್ದಾರೆ ನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.
ಸಂಯೋಜಕ ದಾಮೋದರ ನೆತ್ತರಕೆರೆ ಮಾತನಾಡಿ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಯಶಸ್ವಿಗಾಗಿ ಪೂರ್ವಭಾವಿಯಾಗಿ 6ಗ್ರಾಮಗಳ 60ಕ್ಕೂ ಅಧಿಕ ಕಡೆಗಳಲ್ಲಿ ಕಾರ್ನರ್ ಬೈಠಕ್ ಹಾಗೂ ಗ್ರಾಮದ ಪ್ರತಿ ಹಿಂದೂ ಮನೆಗಳಲ್ಲಿ ಪರಿಸರದ ರಾಮ ಭಕ್ತರು ಒಟ್ಟು ಸೇರಿ ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಪಠಣೆ ನಡೆದಿದೆ, ಕಾರ್ಯಕ್ರಮದ ಧ್ವಜಾರೋಹಣವನ್ನು ಡಾ ಪ್ರಭಾಕರ ಭಟ್ ಕಲ್ಲಡ್ಕ ಮಾಡಲಿದ್ದು,ಡಿ.19ರಂದು ಶುಕ್ರವಾರ ಅಪರಾಹ್ನ ಗಂಟೆ 4-00ಕ್ಕೆ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯ ಮೂಲಕ ನೆತ್ತರಕೆರೆಗೆ ತಲುಪಲಿದೆ ಎಂದರು.
ಮಂಗಳೂರು ವಿಭಾಗ ಗ್ರಾಮ ವಿಕಾಸ ಸಂಯೋಜಕರ ಜಿತೇಂದ್ರ ಪ್ರತಾಪನಗರ ಮಾತನಾಡಿ, ವಿಕಸಿತ ಭಾರತದ ಹಿತದೃಷ್ಟಿಯಿಂದ ಪ್ರತಿ ವ್ಯಕ್ತಿ, ಗ್ರಾಮ,ಕುಟುಂಬ ಸಾಮರಸ್ಯ ಮನೋಭಾವನೆ ಹಾಗೂ ಸಂಸ್ಕಾರಯುತ ವಾಗಬೇಕು, ಕುಟುಂಬ ಪದ್ಧತಿ ಮುಂದಿನ ಪೀಳಿಗೆಗೂ ತಲುಪಬೇಕೆಂಬ ಉದ್ದೇಶದಿಂದ ರಾಮ ನಾಮ ತಾರಕ ಜಪ ಯಜ್ಞ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿಯ ಪ್ರ ಕಾರ್ಯದರ್ಶಿ ಬಿನುತ್ ಕುಮಾರ್ ಅಬ್ಬೆಟ್ಟು, ಕೋಶಾಧಿಕಾರಿ ಕಿಶೋರ್ ಕುಮಾರ್,ಮಾರ್ಗದರ್ಶಕ ಜಯರಾಮ ಶೆಟ್ಟಿ ಅಬ್ಬೆಟ್ಟು, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ಎನ್, ಸಲಹೆಗಾರ ಭಾಸ್ಕರ ಕುಲಾಲ್ ನೆತ್ತರಕೆರೆ ಉಪಸ್ಥಿತರಿದ್ದರು.