ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಿಂದ ಆಲಡ್ಕವಾಗಿ ಮೆಲ್ಕಾರ್ ವರೆಗಿನರಸ್ತೆಯ ಗುಂಡಿಯನ್ನು ಮುಚ್ಚಿ ತೇಪೆ ಕಾರ್ಯ ಆರಂಭಗೊಂಡಿದೆ.
ಮೆಲ್ಕಾರ್ ನಿಂದ ಪಾಣೆಮಂಗಳೂರುವರೆಗೆ ರಸ್ತೆ ಹೊಂಡಗುಂಡಿಗಳಿಂದ ತುಂಬಿದ್ದು, ಸಂಚಾರ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಗೆ ಡಾಂಬರು ಮಾಡುವಂತೆ ಇಲ್ಲಿನ ಪುರಸಭಾ ಸದಸ್ಯರಾಗಿದ್ದ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಮನವಿ ಮಾಡಿದ್ದರು.
ಡಾಮರು ಕಾಣದೆ ಹತ್ತಾರು ವರ್ಷಗಳನ್ನು ಕಂಡಿರುವ ಈ ರಸ್ತೆಗೆ ಪೂರ್ತಿ ಮರುಡಾಮರೀಕರಣ ಹಾಗೂ ಎರಡು ಬದಿಯ ಚರಂಡಿಯ ಹೊಳೆತ್ತುವಂತೆ ಮತ್ತು ದುರಸ್ತಿ ಮಾಡುವಂತೆ ಪಾಣೆಮಂಗಳೂರು 24 ವಾರ್ಡ್ ನ ಪರವಾಗಿ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಅವರು ಪಿ.ಡಬ್ಲೂ.ಡಿ.ಇಲಾಖೆಗೆ ಮನವಿ ನೀಡಿದ್ದರು.
ಮನವಿಗೆ ಸ್ವೀಕರಿಸಿದ ಅಧಿಕಾರಿಗಳು ಪೇಟೆಯ ರಸ್ತೆಯ ಪರಿಶೀಲನೆ ನಡೆಸಿ ಬಳಿಕ ಪಾಣೆಮಂಗಳೂರು ಆಲಡ್ಕ ಮೆಲ್ಕಾರ್ ರಸ್ತೆಗೆ ಮರುಡಾಮರೀಕರಣ ಹಾಗೂ ಚರಂಡಿಯ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದರು.
ಪಾಣೆಮಂಗಳೂರು – ಮೆಲ್ಕಾರ್ ವರೆಗೆ ಸುಮಾರು 1.5 ಕಿಮೀ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಉದ್ದೇಶದಿಂದ ರಸ್ತೆಯ ಗುಂಡಿ ಮುಚ್ಚುವ ಬದಲಿಗೆ ಪೂರ್ತಿ ಡಾಮರೀಕರಣಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸದ್ಯ ಮನವಿಗೆ ಸ್ಪಂದಿಸಿದ ಇಲಾಖೆ ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ತೇಪೆ ಹಾಕುವ ಕಾರ್ಯಾ ಅರಂಬಿಸಿದ್ದಾರೆ.