BEO OFFICE BANTWAL
BEO OFFICE BANTWAL
ಹರೀಶ ಮಾಂಬಾಡಿ
ದಕ್ಷಿಣ ಕನ್ನಡ ಜಿಲ್ಲೆಯ ದೊಡ್ಡ ತಾಲೂಕುಗಳಲ್ಲಿ ಒಂದಾದ ಬಂಟ್ವಾಳದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಇಒ ಹುದ್ದೆಯೇ ಖಾಲಿ ಇರುವುದು ಒಂದು ಸಮಸ್ಯೆಯಾದರೆ, ಇರುವ ಪ್ರಭಾರ ಬಿಇಒ ಅವರಿಗೆ ಶಾಲೆಗಳಿಗೆ ಓಡಾಡಲು ವಾಹನವೇ ಇಲ್ಲ. ಚಾಲಕ ಹುದ್ದೆ ಭರ್ತಿಯಾಗಿದೆ ಆದರೆ ವಾಹನವಿಲ್ಲದೆ ಅವರೇನು ಮಾಡುವುದು? ಹೀಗಾಗಿ ಬೇರೆ ಇಲಾಖೆಗೆ ಚಾಲಕರನ್ನು ನಿಯೋಜಿಸಲಾಗಿದೆ.
ಇಂಥ ಸಮಸ್ಯೆ ಉದ್ಭವವಾಗಿ ಸುಮಾರು ಎರಡು ವರ್ಷಗಳಾದವು. ಬಿಇಒ ಕಚೇರಿಯಲ್ಲಿ ಓಡಾಟಕ್ಕೆಂದು ಬಳಕೆಯಾಗುತ್ತಿದ್ದ ಜೀಪು ತೀರಾ ಹಳೆಯದ್ದು. ನಿರ್ದಿಷ್ಟ ವರ್ಷಗಳಾದ ನಂತರ ವಾಹನಗಳ ಓಡಾಟಕ್ಕೆ ಫಿಟ್ ನೆಸ್ ಸರ್ಟಿಫಿಕೇಟ್ ಬೇಕಾಗುತ್ತದೆ. ಆದರೆ ಇಲ್ಲಿರುವ ವಾಹನ ಇನ್ನು ಓಡಾಟಕ್ಕೆ ಲಾಯಕ್ಕಲ್ಲ ಎಂದು ರಿಟೈರ್ ಆಗಿದೆ. ಸರಕಾರ ಯಾವಾಗ ಬದಲಿ ವಾಹನ ಕೊಡಲು ಮನಸ್ಸು ಮಾಡುತ್ತದೆ ಎಂದು ಇಲ್ಲಿನ ಅಧಿಕಾರಿಗಳು ಕಾದು ಕುಳಿತಿದ್ದಾರೆ.
ಸ್ವಂತ ವಾಹನದಲ್ಲೇ ಓಡಾಟ:
ಕಳೆದ ಎರಡು ವರ್ಷಗಳಿಂದ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದವರು ಹೊರಗುತ್ತಿಗೆ ಆಧಾರದಲ್ಲಿ ವಾಹನವನ್ನು ಪಡೆದು ಬಳಕೆ ಮಾಡುತ್ತಿದ್ದರು. ಆದರೆ ಅದಕ್ಕೂ ಇತಿ, ಮಿತಿಗಳಿವೆ. ಖರ್ಚು, ವೆಚ್ಚಗಳೂ ಜಾಸ್ತಿಯಾಗುತ್ತದೆ. ಇಲಾಖೆಯೇ ನಿಯೋಜಿಸಿದ ಚಾಲಕರು ಇರುವಾಗ ಹೊರಗುತ್ತಿಗೆಯಲ್ಲಿ ವಾಹನ, ಹಾಗೂ ಚಾಲಕರನ್ನು ಬಾಡಿಗೆಗೆ ಪಡೆದು, ಓಡಾಡಿದರೆ, ಸರಕಾರಕ್ಕೇ ಹೊರೆ. ಹೀಗಾಗಿ ಕಳೆದ ತಿಂಗಳು ಶಿಕ್ಷಣಾಧಿಕಾರಿಗಳು ನಿವೃತ್ತಿ ಹೊಂದಿದ ಬಳಿಕ ಹಾಲಿ ಪ್ರಭಾರ ಬಿಇಓ ಕಾರ್ಯಾಚರಿಸುತ್ತಿದ್ದಾರೆ. ಹೀಗಾಗಿ ಬಿಇಒ ಕಚೇರಿಯ ಸಿಬ್ಬಂದಿ ಕಚೇರಿ ಕಾರ್ಯಗಳ ಓಡಾಟಕ್ಕೆ ಸ್ವಂತ ವಾಹನವನ್ನೇ ಬಳಸುತ್ತಿದ್ದಾರೆ.
360 ಶಾಲೆಗಳು, ಮೂರು ಕ್ಷೇತ್ರ:
ಬೇರೆಲ್ಲಾ ತಾಲೂಕುಗಳಲ್ಲಿ ಕೆಲಸ ಮಾಡುವುದಕ್ಕೂ ಬಂಟ್ವಾಳದ ತಾಲೂಕು ಮಟ್ಟದ ಕಚೇರಿಯಲ್ಲಿ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ. ಬಂಟ್ವಾಳ, ಮಂಗಳೂರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರಗಳು ಈ ತಾಲೂಕಿಗೆ ಒಳಪಡುತ್ತದೆ. ಉಳ್ಳಾಲ ತಾಲೂಕಾದರೂ ಹಿಂದೆ ಬಂಟ್ವಾಳದಲ್ಲೇ ಇದ್ದ ಸಜೀಪನಡು, ಮುಡಿಪು, ಬಾಳೆಪೂಣಿವರೆಗಿನ ವ್ಯಾಪ್ತಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸುಪರ್ದಿಗೆ ಒಳಪಡುತ್ತದೆ. ಅನುದಾನಿತ, ಸರಕಾರಿ ಸೇರಿ ಸುಮಾರು 360 ಶಾಲೆ, ಹೈಸ್ಕೂಲುಗಳು ಬಂಟ್ವಾಳ ಬಿಇಒ ಕಚೇರಿ ವ್ಯಾಪ್ತಿಗೆ ಬರುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರ ಬರುತ್ತಿರುವ ವೇಳೆ ಇದರ ಪೂರ್ವತಯಾರಿ ಸಹಿತ ಹಲವು ಕೆಲಸ ಕಾರ್ಯಗಳಿಗೆ ಬಿಇಒ ಕಚೇರಿಯಿಂದ ಶಾಲೆಗಳಿಗೆ ಹೋಗಲೇಬೇಕು. ಆದರೆ, ವಾಹನವೇ ಇಲ್ಲದಿದ್ದರೆ ಹೇಗೆ ಹೋಗುವುದು?