ಹಿಂದು ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಶನಿವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತೀ ಸ್ವಾಮೀಜಿ, ಸಮಾಜ ಒಂದಾಗಿದ್ದರೆ ಸಾಧನೆ ಸಾಧ್ಯವಾಗುತ್ತದೆ.ನಮ್ಮ ಒಗ್ಗಟ್ಟಿನ ದ್ಯೋತಕವಾಗಿ ಇಂದು ಭಗವಾನ್ ಶ್ರೀರಾಮಚಂದ್ರನ ಭವ್ಯವಾದ ಮಂದಿರ ಅಯೋಧ್ಯೆಯಲ್ಲಿದೆ.
ದೇಹಪ್ರೇಮದಂತೆ ದೇಶಪ್ರೇಮವೂ ನಮ್ಮಲ್ಲಿ ಇರಲಿ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರ ಪ್ರಮುಖ್ ಸೂರಜ್ ದಿಕ್ಸೂಚಿ ಭಾಷಣ ಮಾಡಿ, ಶ್ರೀರಾಮಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟವನ್ನು ನೆನಪಿಸಿ, ಭವಿಷ್ಯದಲ್ಲಿ ಹಿಂದು ಸಮಾಜ ಏಕಮತದಿಂದ ಕೆಲಸ ಮಾಡಬೇಕಾಗಿದೆ ಎಂದರು.
ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು, ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ತಾಲೂಕು ಸಂಯೋಜಕ ಪ್ರವೀಣ್ ಬೆಂಜನಪದವು ಉಪಸ್ಥಿತರಿದ್ದರು. ಸಬಾ ಸಮಾರಂಭದ ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.