ಬಂಟ್ವಾಳ: ಬೇರೆ ಶಾಲೆಗೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಮತ್ತೆ ತಮ್ಮ ಶಾಲೆಯಲ್ಲಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ದೇವಸ್ಯಮುಡೂರು ಹಿರಿಯ ಪ್ರಾಥಮಿಕ ಶಾಲೆಯ ಪೋಷಕರು, ವಿದ್ಯಾರ್ಥಿಗಳು ಮಂಗಳವಾರ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಸೇರಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಎಸ್.ಡಿ.ಎಂ.ಸಿ. ಅಧ್ಯಕ್ಷ ವಸಂತ ಮುದಿಮಾರ್, ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಳೆದೆರಡು ವರ್ಷಗಳಿಂದ ಜಾಸ್ತಿಯಾಗಿದೆ. ಆದರೆ ಅದಕ್ಕೆ ಪೂರಕವಾಗಿ ಶಿಕ್ಷಕರಿಲ್ಲ. 94 ಮಕ್ಕಳಿರುವ ಶಾಲೆಯಲ್ಲಿ ಸರಕಾರ ನಿಯೋಜಿಸಿದ ಮೂವರು ಶಿಕ್ಷಕರಲ್ಲಿ ಒಬ್ಬರನ್ನು ಬೇರೆ ಶಾಲೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ಶಾಲೆಯ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಪಾಠ ಮಾಡಲು ಶಿಕ್ಷಕರ ಕೊರತೆ ಇರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಪೋಷಕರು ಕಚೇರಿ ಮುಂಭಾಗ ಕರೆದುಕೊಂಡು ಬಂದಿದ್ದಾರೆ ಎಂದರು.
ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ಸಂಚಾಲಕ ಮೊಯ್ದೀನ್ ಕುಟ್ಟಿ ಈ ಸಂದರ್ಭ ಮಾತನಾಡಿ, ಒಂದರಿಂದ ಏಳನೇವರೆಗಿನ ತರಗತಿಯನ್ನು ಎರಡು ಶಿಕ್ಷಕರನ್ನು ಇಟ್ಟುಕೊಂಡು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗಿದೆ. ಶಿಕ್ಷಕರು ಇಲ್ಲದೇ ಇರುವ ಸಂದರ್ಭ, ಇನ್ನೊಂದು ಶಾಲೆಗೆ ನಿಯೋಜನೆ ಮಾಡಿದ್ದು ಸರಿಯಲ್ಲ. ನಿಯೋಜನೆಯಲ್ಲಿದ್ದವರನ್ನು ಶಾಲೆಗೆ ವಾಪಸ್ ತರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಬಿಇಒ ಭರವಸೆ ನೀಡಿದ್ದಾರೆ ಎಂದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಯಶವಂತ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಶಿವಾನಂದ ಪೂಜಾರಿ, ಕರೀಮ್, ಸುರೇಶ್ ಪೂಜಾರಿ, ಹರೀಶ್ ಕುಂಟಾಲಪಲ್ಕೆ, ನಝೀಮಾ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಅವರು ಮನವಿಯನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಇಸಿಒ ರಮಾನಂದ ನೂಜಿಪ್ಪಾಡಿ, ಮೆನೇಜರ್ ಹರಿಣಾಕ್ಷಿ, ಸುಪರಿಂಟೆಂಡೆಂಟ್ ಹರ್ಷೇಂದ್ರ ಮತ್ತು ಪುಷ್ಪರಾಜ್ ಉಪಸ್ಥಿತರಿದ್ದರು.