ಬಂಟ್ವಾಳದಲ್ಲಿರುವ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಡೆದವು. ಸುಮಾರು ಒಂದು ಸಾವಿರದಷ್ಟು ವಿದ್ಯಾರ್ಥಿಗಳು ತಾಲೂಕಿನ ನಾನಾ ಭಾಗಗಳಿಂದ ಆಗಮಿಸಿ, ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ತಾಲೂಕಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಜೊತೆಗೆ ಉನ್ನತ ಸಾಧನೆಯನ್ನು ತೋರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವಂತಾಗಬೇಕು, ದೇಶ ಇಂದು ಕ್ತೀಡಾಚಟುವಟಿಕೆಗಳಲ್ಲಿ ಮುಂದಿದ್ದು, ಪ್ರತಿಭಾ ವಿಕಾಸಕ್ಕೆ ಹಲವು ಅವಕಾಶಗಳಿವೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಶಿಕ್ಷಣಪ್ರೇಮಿಗಳ ಪ್ರೋತ್ಸಾಹ, ಸಹಕಾರದಿಂದ ಸ್ಪರ್ಧೆ ಆಯೋಜನೆಯಾಗುತ್ತಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಇಂದು ಪಠ್ಯಕ್ರಮದಲ್ಲಿ ಮೌಲ್ಯ ಶಿಕ್ಷಣಕ್ಕೆ ಮಹತ್ವ ನೀಡುವ ಅವಶ್ಯಕತೆಯಿದೆ. ಇಂದಿನ ದಿನಮಾನದಲ್ಲಿ ಮಕ್ಕಳು ನಮ್ಮಿಂದಲೂ ಬುದ್ಧಿವಂತರಿರುತ್ತಾರೆ. ಆದರೆ ತಪ್ಪು ಮಾಡುವುದರಲ್ಲೂ ಬುದ್ಧಿವಂತರಾಗುತ್ತಿರುವುದು ವಿಷಾದನೀಯ. ಹೀಗಾಗಿ ಮಕ್ಕಳನ್ನು ಸದ್ವಿಚಾರಗಳ ಮೂಲಕ ಮನುಷ್ಯತ್ವ ರೂಪಿಸಲು ತಿದ್ದುವ ಜವಾಬ್ದಾರಿ ಶಿಕ್ಷಕರಿಗಿದೆ ಎಂದರು.
ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಬಂಟ್ವಾಳ ಬಿ.ಆರ್. ಸಿ. ವಿದ್ಯಾ ನಾಯಕ್, ನಾನಾ ಸಂಘಟನೆಗಳ ಪ್ರಮುಖರಾದ ಶಿವಪ್ರಸಾದ್ ಶೆಟ್ಟಿ, ಮಾಲತಿ, ಜಯರಾಮ್, ಜೋಯಲ್ ಲೋಬೊ, ಶಂಕರ ಕಾರಂತ, ಲ್ಯಾನ್ಸಿ, ಬಾಲಕೃಷ್ಣ ಶೆಟ್ಟಿ, ಮುರಳೀಕೃಷ್ಣ, ಸಂದೇಶ್, ಗುರುರಾಜ್, ಪ್ರೇಮಾ, ಶಾಲಾ ಸಂಚಾಲಕ ಅಶೋಕ್ ಶೆಣೈ,
ಎಸ್.ವಿ.ಎಸ್. ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಗಳಾದ ರೋಷನಿ ತಾರಾ, ಸುರೇಖಾ ಉಪಸ್ಥಿತರಿದ್ದರು.
ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ರಮಾನಂದ ನೂಜಿಪ್ಪಾಡಿ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಕರ್ಕೇರ ಕಾರ್ಯಕ್ರಮ ನಿರ್ವಹಿಸಿದರು.