ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಬಂಟ್ವಾಳ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಬಂಟ್ವಾಳ ಪುರಸಭೆ ಸಹಿತ ನಾನಾ ಇಲಾಖೆಗಳ ಆಶ್ರಯದಲ್ಲಿ ಬಿ.ಸಿ.ರೋಡ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ನಡೆಯಿತು.
ಈ ಸಂದರ್ಭ, ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಮಂಜುನಾಥ್ ಅವರು ಸಂವಿಧಾನ ಪೀಠಿಕೆ ವಾಚಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸುರೇಖಾ ಯಳವರ ಸಂವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಉಪಸ್ಥಿತರಿದ್ದರು. ಡಾ. ಅಂಬೇಡ್ಕರ್ ಅವರ ಛದ್ಮವೇಷಧಾರಿ ವಿದ್ಯಾರ್ಥಿ ಮುತ್ತಪ್ಪ ಗಮನ ಸೆಳೆದರು. ಬಂಟ್ವಾಳ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯಾ ಕುಮಾರಿ ಸ್ವಾಗತಿಸಿದರು. ಮೇಲ್ವಿಚಾರಕ ಪ್ರಸಾದ್ ವಂದಿಸಿದರು. ಪಾಣೆಮಂಗಳೂರು ಬಾಲಕಿಯರ ವಿದ್ಯಾರ್ಥಿನಿಲಯ ಮೇಲ್ವಿಚಾರಕಿ ಭವ್ಯಾ ಪಿ. ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಡಾ. ಬಿ.ಆರ್.ಅಂಬೇಡ್ಕರ್ ಭವನದವರೆಗೆ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತ ಬರೆಹಗಳಿರುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಜಾಥಾ ನಡೆಯಿತು.