ಕವರ್ ಸ್ಟೋರಿ

ಪುರಸಭೆಗೆ ನೂತನ ಮುಖ್ಯಾಧಿಕಾರಿ, ಆಡಳಿತಾಧಿಕಾರಿಗೆ ಸವಾಲುಗಳ ಸರಣಿ

BANTWAL TOWN MUNCIPALITY

ಹರೀಶ ಮಾಂಬಾಡಿ

ಜನಪ್ರತಿನಿಧಿಗಳ ಆಡಳಿತದಲ್ಲಿದ್ದ ಬಂಟ್ವಾಳ ಪುರಸಭೆಗೆ ಕಳೆದ ಎರಡು ದಿನಗಳ ಹಿಂದೆ ನೂತನ ಆಡಳಿತಾಧಿಕಾರಿ ನೇಮಕವಾಗಿದೆ. ಮಂಗಳೂರು ಸಹಾಯಕ ಕಮೀಷನರ್ ಮೀನಾಕ್ಷಿ ಆರ್ಯ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಪುರಸಭೆಗೆ ನೂತನ ಮುಖ್ಯಾಧಿಕಾರಿ ತೀರ್ಥಪ್ರಸಾದ್ ವರ್ಗಾವಣೆ ಹೊಂದಿ ಆಗಮಿಸಿದ್ದಾರೆ. ಇದರೊಂದಿಗೆ ಜನಪ್ರತಿನಿಧಿಗಳ ಆಡಳಿತಕ್ಕೆ ಅಲ್ಪವಿರಾಮ ದೊರಕಿದಂತಾಗಿದೆ.

ಜಾಹೀರಾತು

ಕಳೆದ 10 ತಿಂಗಳಲ್ಲಿ ಮೂವರು ಪ್ರಭಾರ ಮುಖ್ಯಾಧಿಕಾರಿಗಳನ್ನು ಬಂಟ್ಚಾಳ ಪುರಸಭೆ ಕಂಡಿತ್ತು. ಇದೀಗ ಕೆ.ಎಂ.ಎ.ಎಸ್ ಶ್ರೇಣಿಯ ಕೆ.ಬಿ.ತೀರ್ಥಪ್ರಸಾದ್ ಅವರು ಖಾಯಂ ಮುಖ್ಯಾಧಿಕಾರಿಯಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ಪುರಸಭೆಯಲ್ಲಿ‌ಜನಪ್ರತಿನಿಧಿಗಳ‌ಐದುವರ್ಷದ ಆಡಳಿತ  ಸಮಾಪನಗೊಳ್ಳುತ್ತಿದ್ದಂತೆ ಕಾಯಂ ಮುಖ್ಯಾಧಿಕಾರಿ ನೇಮಕಗೊಂಡು ಪ್ರಭಾರ ಮುಖ್ಯಾಧಿಕಾರಿ ಮತ್ತಡಿ ಅವರಿಂದ ಅಧಿಕಾರ ಸ್ವೀಕರಿಸಿದ ತಕ್ಷಣ ಪುರಸಭೆಯ ಎಲ್ಲಾ ಸಿಬ್ಬಂದಿಗಳ ಸಭೆಯನ್ನು ತೀರ್ಥಪ್ರಸಾದ್ ನಡೆಸಿದ್ದಾರೆ.

ಸವಾಲುಗಳೇನು?

ಪ್ರಮುಖವಾಗಿ ಎರಡನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಿರ್ವಹಣೆ ಸಮಸ್ಯೆ, ಮೊದಲ ಹಂತದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ದೊರಕದೇ ಇರುವುದು, ನೇತ್ರಾವತಿ ನದಿಗೆ ಮಲಿನವಸ್ತುಗಳು ಸೇರುವುದು, ಕಂಚಿನಡ್ಕ ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆ, ಬಿ.ಸಿ.ರೋಡ್, ಬಂಟ್ವಾಳದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ, ಒತ್ತುವರಿ ಸಮಸ್ಯೆ, ನೆನೆಗುದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ಯೋಜನೆ, ಕಂಡಕಂಡಲ್ಲಿ ಫ್ಲೆಕ್ಸ್ ಅಳವಡಿಸಿರುವುದು, ರಸ್ತೆ ಬದಿಯಲ್ಲಿ ಅನಧಿಕೃತ ಅಂಗಡಿ, ಮಾರಾಟ ಮಳಿಗೆಗಳ ನಿಯಂತ್ರಣವೇ ಮೊದಲಾದವುಗಳನ್ನು ನಿರ್ವಹಿಸಬೇಕಾದ ಒತ್ತಡ ಮುಖ್ಯಾಧಿಕಾರಿಗೆ ಇದೆ. ಆಡಳಿತಾಧಿಕಾರಿಗಳಾಗಿ 2023ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ  ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಯಂ ಹುದ್ದೆ ಭರ್ತಿಯೇ ಆಗಿಲ್ಲ:

ಹಾಗೆ ನೋಡಿದರೆ, ಸದ್ಯ ಮುಖ್ಯಾಧಿಕಾರಿ ಹುದ್ದೆಯಷ್ಟೇ ಭರ್ತಿ ಆಗಿದೆ. ಆರೋಗ್ಯ ನಿರೀಕ್ಷಕರು, ಪರಿಸರ ಎಂಜಿನಿಯರ್ ಹುದ್ದೆ ಖಾಲಿ. ಪುರಸಭೆಯಲ್ಲಿ ಇಂಜಿನಿಯರ್ ಹುದ್ದೆ ಒಂದು ಖಾಲಿ ಇದೆ. ಅದಕ್ಕೆ ಯಾರೂ ಬಂದಿಲ್ಲ. ಮೆನೇಜರ್ ಹುದ್ದೆ ಭರ್ತಿಯಾಗಿಲ್ಲ. ಎಫ್.ಡಿ.ಸಿ. ಹುದ್ದೆಯೂ ಖಾಲಿ ಇದೆ. ಖಾಯಂ ಅಕೌಂಟೆಂಟ್ ಇಲ್ಲ. ಹೀಗೆ ಇಲ್ಲಗಳ ಸರಮಾಲೆಯೇ ಪುರಸಭೆಯಲ್ಲಿದೆ.  ಪುರಸಭಾ ಮೀಟಿಂಗ್ ಗಳಲ್ಲಿ ವ್ಯವಸ್ಥೆಯ ಲೋಪದೋಷಗಳನ್ನು ಸದಸ್ಯರು ಗಮನಸೆಳೆಯುತ್ತಿದ್ದರು. ಸಾರ್ವಜನಿಕರು ಹಾಗೂ ಪುರಸಭೆಯ ಮಧ್ಯೆ ಸಂವಹನವಾಗಿದ್ದ ಜನಪ್ರತಿನಿಧಿಗಳು ಇಲ್ಲದೆ, ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಪುರಸಭೆಯ ಕಚೇರಿ ಬಾಗಿಲು ತಟ್ಟುವುದು ಪುರವಾಸಿಗಳಿಗೆ ಅನಿವಾರ್ಯವಾಗಿದೆ. ಆದರೆ ಸದ್ಯದ ಮಟ್ಟಿಗೆ ಜನಪ್ರತಿನಿಧಿಗಳು ಸಕ್ರಿಯವಾಗಿ ಪುರಸಭೆಯೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಜನರು ಈಗಲೂ ಸಮಸ್ಯೆಗೆ ಕೌನ್ಸಿಲರ್ ಗಳನ್ನೇ ಸಂಪರ್ಕಿಸುತ್ತಿದ್ದಾರೆ.

 ಪುರಸಭೆಯ ದೊಡ್ಡ ಸವಾಲುಗಳು

  • ತ್ಯಾಜ್ಯ ನಿರ್ವಹಣಾ ಘಟಕ ರಾಷ್ಟ್ರೀಯ ಹಸಿರುಪೀಠದ ನಿರ್ದೇಶನ ಮೇಲೆ ನಿರ್ವಹಿಸುವುದು.
  • ನೇತ್ರಾವತಿ ನದಿಗೆ ಮಾಲಿನ್ಯ ಸೇರದಂತೆ ನಿಗಾ ವಹಿಸುವುದು
  • ಪ್ಲಾಸ್ಟಿಕ್ ನಿಷೇಧ,
  • ಬೀದಿ ನಾಯಿ ಹಾವಳಿ ನಿಯಂತ್ರಣ
  • ಅತಿಕ್ರಮಣ ತೆರವು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.