ಬೈಕ್ ಸ್ಕಿಡ್ ಆಗಿ ಡಾಂಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹೋಟೆಲ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮಗಳನ್ನು ಅವರು ಹೊಂದಿದ್ದರು,
ಬಾಳ್ತಿಲ ಗ್ರಾಮದ ಚೆಂಡೆ ನೀರಪಾದೆ ನಿವಾಸಿ ಯಶವಂತ ಯಾನೆ ಚೇತನ್ ( 35) ಮೃತಪಟ್ಟವರು. ಚೇತನ್ ಅವರು ಮನೆಯಿಂದ ಬಿಸಿರೋಡಿಗೆ ಬರುವ ವೇಳೆ ಸಣ್ಣಕುಕ್ಕು ಎಂಬಲ್ಲಿ ಅಪಘಾತ ಸಂಭವಿಸಿದೆ.
ಚೇತನ್ ಅವರು ಬಿಸಿರೋಡಿನ ಸೋಮಯಾಜಿ ಹೌಸ್ ನಲ್ಲಿರುವ ಹೋಟೆಲ್ ಕೃಷ್ಣ ವಿಲಾಸದಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದರು. ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆ ಯಾತ್ರೆಗೆ ಹೋಗಿ ನ.19ರಂದು ಮನೆಗೆ ಬಂದಿದ್ದರು.
ಹಾಗಾಗಿ ರಜೆಯಲ್ಲಿದ್ದ ಇವರು ಸಂಬಂಧಿಕರ ಮನೆಗೆ ಹೋಗಿ ಶಬರಿಮಲೆ ದೇವಸ್ಥಾನದಿಂದ ತಂದ ಪ್ರಸಾದ ವಿತರಿಸಿ, ಬಳಿಕ ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿದ್ದರು.
ಸಂಜೆ ಸುಮಾರು 8 ಗಂಟೆ ವೇಳೆ ಸ್ನೇಹಿತರು ಅವರನ್ನು ಪೋನ್ ಮಾಡಿ ಪೇಟೆಗೆ ಬರುವಂತೆ ಕರೆದಿದ್ದರು. ಹಾಗಾಗಿ ಅವರು ಬೈಕಿನಲ್ಲಿ ಹೊರಟು ಬರುವ ಸಂದರ್ಭ ಸಣ್ಣಕುಕ್ಕು ಎಂಬಲ್ಲಿ ಸ್ಕಿಡ್ ಆಗಿ ಬಿದ್ದು ತಲೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ವಿವೇಕಾನಂದ ಫ್ರೆಂಡ್ಸ್ ಕ್ಲಬ್ ನ ಸಕ್ರೀಯ ಸದಸ್ಯನಾಗಿದ್ದ ಇವರು ಸದಾ ಹಸನ್ಮುಖಿಯಾಗಿದ್ದರು.. ಬಂಟ್ವಾಳ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.