ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಡಿಸೆಂಬರ್ 13ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಬಂಟ್ವಾಳ ನ್ಯಾಯಾಲಯಗಳಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ನ್ಯಾಯಾಲಯ ಸಭಾಂಗಣದಲ್ಲಿ ನಡೆಯಿತು.
ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಆಸ್ತಿ ವಿವಾದಗಳು, ವಿಭಾಗ ಮೊಕದ್ದಮೆಗಳು, ಹಣ ವಸೂಲಿ ಪ್ರಕರಣಗಳು, ನಿರ್ಧಿಷ್ಟ ಪರಿಹಾರ ಕಾಯ್ದೆಯಡಿಯಲ್ಲಿ ದಾಖಲಾದ ಮೊಕದ್ದಮೆಗಳು, ಮೋಟಾರು ವಾಹನ ಪ್ರಕರಣಗಳು, ಎಂಎಂಆರ್ಡಿ ಪ್ರಕರಣಗಳು, ವಿವಾಹ ಸಮನ್ವಯ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಇತರ ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ವಿವಾದಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನ ಮಾಡುವುದಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಜೊತೆಗೆ ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳಿಗೆ ಸಂಬಂಧಿಸಿದ ವಿವಾದಗಳು, ಕಾರ್ಮಿಕ ವಿವಾದಗಳು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದಾಗಿದೆ. ವಕೀಲರ ಮುಖಾಂತರ ಅಥವಾ ತಾವೇ ಖುದ್ದಾಗಿ ಸಮಿತಿಗೆ ಭೇಟಿ ನೀಡಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದು ಎಂದು ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ ನಾನಾ ಅಧಿಕಾರಿಗಳಿಗೆ ಬಂಟ್ವಾಳ ತಾಲುಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಅನಿಲ್ ಪ್ರಕಾಶ್ ಎಂ. ಪಿ ಹಾಗೂ ಸದಸ್ಯ ಕಾರ್ಯದರ್ಶಿ ಕೃಷ್ಣ ಮೂರ್ತಿ. ಎನ್ ತಿಳಿಸಿದರು.
ನ್ಯಾಯಾಂಗ ಅಧಿಕಾರಿಗಳು, ವಕೀಲರು ಮತ್ತು ಇಲಾಖಾಧಿಕಾರಿಗಳು, ವಿಮಾ ಸಂಸ್ಥೆಗಳು ಮತ್ತು ಬ್ಯಾಂಕ್ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ವಿಚಾರಣೆ ನಡೆಸಿ ವಿವಾದಗಳನ್ನು ಇತ್ಯರ್ಥಪಡಿಸುವಲ್ಲಿ ಅವರು ಮಾರ್ಗದರ್ಶನ ನೀಡಿದರು.
ಜನರಿಗೆ ಲೋಕ ಅದಾಲತ್ ಬಗ್ಗೆ ತಿಳಿಯುವಂತೆ ಮಾಡಲು ಪುರಸಭೆಗೆ ಕಸ ವಿಲೇವಾರಿ ವಾಹನಕ್ಕೆ ಲೋಕ ಅದಾಲತ್ಗೆ ಸಂಬಂಧಿಸಿದ ಆಡೀಯೋ ತುಣುಕನ್ನು ನೀಡಿದ್ದು, ಪ್ರತಿ ವಾರ್ಡಿಗೆ ಕಸ ಸಂಗ್ರಹಿಸಲು ಹೋಗುವಾಗ ಆಡೀಯೋ ವನ್ನು ಹಾಕಿ ಮನೆ ಮನೆಗೆ ಈ ವಿಚಾರ ತಿಳಿಯವಂತೆ ಮಾಡುವ ಕ್ರಮವನ್ನು ಸಮಿತಿ ಕೈಗೊಂಡಿದೆ. ಜನಸಾಮಾನ್ಯರು ಹಾಗೂ ಕಕ್ಷಿದಾರರು ದಾವಾ ಪ್ರಕರಣಗಳನ್ನು ಮತ್ತು ದಾವಾ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವವರು ನ್ಯಾಯಾಲಯಕ್ಕೆ ಹಾಜರಾಗಿ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಹಾಜರಾಗಿ ಸದುಪಯೋಗಪಡಿಸಿಕೊಳ್ಳಲು ಅವಕಾಶವನ್ನು ನ್ಯಾಯಾಲಯವು ನೀಡಿದೆ.