ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪವೇ ಇರುವ ಸೋಮಯಾಜಿ ಟೆಕ್ಸ್ ಟೈಲ್ ಸೆಂಟರ್ ನ ಮಾಲಿಕ ಕೃಷ್ಣಕುಮಾರ್ ಸೋಮಯಾಜಿ ಮೇಲೆ ಅವರ ಪತ್ನಿ ಕತ್ತಿಯಿಂದ ಹಲ್ಲೆ ನಡೆಸಿದ ಆರೋಪದ ಘಟನೆಗೆ ಸಂಬಂಧಿಸಿ ಆರೋಪಿ ಜ್ಯೋತಿಯನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಗಾಯಾಳು ಕೃಷ್ಣಕುಮಾರ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನೀಡಿದ ದೂರಿನಂತೆ ವಿವರ ಹೀಗಿದೆ. ಬುಧವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ಕೃಷ್ಣ ಕುಮಾರ್ ಸೋಮಯಾಜಿಯವರು ಕ್ಯಾಷಿಯರ್ ಕೌಂಟರ್ ನಲ್ಲಿದ್ದು, ರಿಕ್ಷಾದಿಂದ ಒಬ್ಬ ಬುರ್ಖಾಧಾರಿ ಹೆಂಗಸೊಬ್ಬರು ಇಳಿದು, ಅಟೋ ರಿಕ್ಷಾ ಚಾಲಕರಲ್ಲಿ ಮಾತಾಡಿಕೊಂಡಿದ್ದು, ನಂತರ ಬುರ್ಖಾಧಾರಿ ಹೆಂಗಸು ಗ್ರಾಹಕರ ಸೋಗಿನಲ್ಲಿ ಅಂಗಡಿಯ ಒಳಗೆ ಬಂದು ಹೆರಿಗೆಯಾದ ನವಜಾತ ಮಗುವಿಗೆ ಕಟ್ಟುವ ಬಟ್ಟೆ ಇದೆಯಾ ಎಂದು ಹಿಂದಿಯಲ್ಲಿ ಕೇಳಿದ್ದಾರೆ. ಅದು ಮಹಡಿಯಲ್ಲಿರುವ ಕಾರಣ ಮಹಡಿಗೆ ಬನ್ನಿ ಎಂದು ಸಿಬ್ಬಂದಿ ಕರೆದರೂ ಹೆಂಗಸು “ನಾನು ಮೇಲೆ ಬರುವುದಿಲ್ಲ” ಎಂದು ಹಿಂದಿಯಲ್ಲಿ ಹೇಳಿ ಕೆಳಗೆಯೇ ನಿಂತುಕೊಂಡು ಸಮಯ ಸಾಧಿಸಿ ಕತ್ತಿಯಿಂದ ದಾಳಿ ಮಾಡಿದ್ದಾಳೆ.ಈ ವೇಳೆ ಹೆಚ್ಚಿನ ಹಲ್ಲೆಯಿಂದ ತಪ್ಪಿಸಿಕೊಂಡ ಕೃಷ್ಣಕುಮಾರ್ ಅವರನ್ನು ಸಿಬ್ಬಂದಿ ಅಟೋ ರಿಕ್ಷಾವೊಂದರಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆತಂದು ಅಲ್ಲಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ಅವರನ್ನು ಮಂಗಳೂರಿಗೆ ರವಾನಿಸಲಾಗಿದೆ. ಪ್ರಸ್ತುತ ಗಾಯಾಳು ಮಂಗಳೂರಿನ ಎ.ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲ್ಲೆ ನಡೆಸಿದ ಮಹಿಳೆ ಕೃಷ್ಣ ಕುಮಾರ್ ಸೋಮಯಾಜಿರವರ ಪತ್ನಿ ಜ್ಯೋತಿ ಕೆ.ಟಿ ಎಂದು ಗುರುತಿಸಲಾಗಿದ್ದು, ಆಕೆಯ ವಿಚಾರನೆ ನಡೆಯುತ್ತಿದೆ. ಅಪಾದಿತೆ ಈ ಹಿಂದೆಯೂ ಅಂಗಡಿಗೆ ಬಂದು ಜೀವ ಬೆದರಿಕೆ ಹಾಕಿ ಹೋಗಿರುದಾಗಿ ದೂರಿನಲ್ಲಿ ತಿಳಿಸಲಾಗಿದೆ.