ಬಂಟ್ವಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ನರೇಗಾ) 2026-27ನೇ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯವನ್ನು (Labour Budget) ವೈಜ್ಞಾನಿಕವಾಗಿ ಸಿದ್ಧಪಡಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು “ಯುಕ್ತಧಾರ” ತಂತ್ರಾಂಶವನ್ನು ಜಾರಿಗೊಳಿಸಿದೆ. “ಗ್ರಾಮಾಭಿವೃದ್ಧಿಯ ಹೊಸ ಹಾದಿ-ಯುಕ್ತಧಾರ” ಮಾರ್ಗಸೂಚಿಗಳನ್ನು ಅನುಸರಿಸಿ ಸಿದ್ಧಪಡಿಸಲಾಗುವ 2026-27ನೇ ಸಾಲಿನ ಕಾರ್ಮಿಕ ಆಯವ್ಯಯ (ಕ್ರಿಯಾಯೋಜನೆ) ತಯಾರಿಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಇಚ್ಛಿಸುವ ಅರ್ಹ ಫಲಾನುಭವಿಗಳು ನ.20ರೊಳಗೆ ಅರ್ಜಿಯನ್ನು ಗ್ರಾಮ ಪಂಚಾಯತ್‌ಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ರೈತರು, ಕೃಷಿಕರು ಹಾಗೂ ಅರ್ಹ ಕುಟುಂಬಗಳಿಗೆ ಸರ್ಕಾರದಿಂದ ಸಹಾಯಧನ ಪಡೆಯುವ ಮೂಲಕ ತಮ್ಮ ಜೀವನೋಪಾಯ ಸುಧಾರಿಸಿಕೊಳ್ಳಲು ನರೇಗಾ ಯೋಜನೆ ಸಹಕಾರಿಯಾಗಿದೆ.
ಅರ್ಜಿ ಸಲ್ಲಿಕೆಗೆ ಗಡುವು: ಯೋಜನೆಯಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಇಚ್ಛಿಸುವ ಫಲಾನುಭವಿಗಳು ಕ್ರಿಯಾ ಯೋಜನೆ ತಯಾರಿಗೆ ಮುನ್ನ ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಅರ್ಜಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ನಿಗದಿತ ದಿನಾಂಕದ ನಂತರ, ಅಂದರೆ ಕ್ರಿಯಾಯೋಜನೆ ತಯಾರಾದ ಮೇಲೆ ಯಾವುದೇ ಅರ್ಜಿಗಳನ್ನು ಸ್ವೀಕರಿಸಲು ಹಾಗೂ ಕ್ರಿಯಾಯೋಜನೆಯಲ್ಲಿ ಅಳವಡಿಸಲು ಅವಕಾಶವಿರುವುದಿಲ್ಲ.
ಕಾಮಗಾರಿಗಳಿಗೆ ಅವಕಾಶ: ನರೇಗಾ ಯೋಜನೆಯಡಿ ವಿವಿಧ ಕೃಷಿ, ತೋಟಗಾರಿಕೆ ಮತ್ತು ಜಲ ಸಂರಕ್ಷಣಾ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದು. ತೆರೆದ ಬಾವಿ, ಕೊಳವೆ ಬಾವಿ ಮರುಪೂರಣ ಘಟಕ, ಕೃಷಿ ಹೊಂಡ ರಚನೆ, ಇಂಗುಗುಂಡಿ ಮತ್ತು ದ್ರವತ್ಯಾಜ್ಯ ಗುಂಡಿಗಳ ನಿರ್ಮಾಣದಂತಹ ಜಲ ಸಂಪನ್ಮೂಲ ಹೆಚ್ಚಿಸುವ ಕಾಮಗಾರಿಗಳನ್ನು ಕೈಗೊಳ್ಳಬಹುದು.
ಜೀವನೋಪಾಯ ಹೆಚ್ಚಿಸುವ ದೃಷ್ಟಿಯಿಂದ, ದನದ ಹಟ್ಟಿ, ಮೇಕೆ/ಕುರಿ ಶೆಡ್, ಹಂದಿ ಶೆಡ್, ಕೋಳಿ ಶೆಡ್‌ಗಳ ನಿರ್ಮಾಣಕ್ಕೆ ಸಹಾಯಧನ ಲಭ್ಯವಿದ್ದು, ಜೊತೆಗೆ ಎರೆಹುಳು ಗೊಬ್ಬರ ಘಟಕ ಮತ್ತು ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಲು ಹಾಗೂ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಚಿಕ್ಕು, ಕಾಳುಮೆಣಸು, ಕ್ಕೊಕ್ಕೋ, ವೀಳ್ಯದೆಲೆ, ಮಾವು, ಗುಲಾಬಿ, ತಾಳೆ, ಗೇರು, ಮಲ್ಲಿಗೆ, ಅಂಗಾಂಶ ಬಾಳೆ, ಪಪ್ಪಾಯ, ನುಗ್ಗೆ, ರಂಬೂಟನ್, ಪೇರಳೆ, ಹಾಗೂ ಡ್ರ್ಯಾಗನ್ ಫ್ರೂಟ್ ಬೆಳೆಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು. ಕುಟುಂಬದ ಪೌಷ್ಟಿಕಾಂಶದ ಭದ್ರತೆಗಾಗಿ ಪೌಷ್ಟಿಕ ತೋಟ ರಚನೆ ಮತ್ತು ಜಮೀನಿನಲ್ಲಿ ಬಸಿಗಾಲುವೆ (ಉಜಿರ್ ಕಣಿ) ರಚನೆಗೂ ಅವಕಾಶ ಕಲ್ಪಿಸಲಾಗಿದೆ.
ಅರ್ಹರು ಮತ್ತು ಬೇಕಾದ ದಾಖಲೆಗಳು:
ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರು, ಬಿ.ಪಿ.ಎಲ್ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಪ್ರಧಾನ ಕುಟುಂಬಗಳು, ಪರಿಶಿಷ್ಟ ಜಾತಿ/ಪಂಗಡ, ಅಲೆಮಾರಿ ಪಂಗಡಗಳು, ಮತ್ತು ಪ್ರಕಟಣೆಯಿಂದ ಹೊರಗಿಟ್ಟ ಬುಡಕಟ್ಟು ಜನಾಂಗದವರು ಅರ್ಹರಾಗಿರುತ್ತಾರೆ. ಜೊತೆಗೆ, ಭೂ ಸುಧಾರಣಾ ಕಾಯ್ದೆ ಮತ್ತು ವಸತಿ ಯೋಜನೆಯ ಫಲಾನುಭವಿಗಳು, ಹಾಗೂ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006 (2007ರ 2)ರಡಿಯ ಫಲಾನುಭವಿಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವಾಗ ತಮ್ಮ ಉದ್ಯೋಗ ಚೀಟಿ, ಬಿಪಿಎಲ್ ಕಾರ್ಡ್ ಪ್ರತಿ (ಎಪಿಎಲ್ ಆಗಿದ್ದಲ್ಲಿ ಸಣ್ಣ ರೈತ ಪ್ರಮಾಣ ಪತ್ರ), ಪ.ಜಾತಿ/ಪಂಗಡದ ಜಾತಿ ಪ್ರಮಾಣ ಪತ್ರ, ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ (ಪಹಣಿ) ಪ್ರತಿ, ಮತ್ತು ಹಕ್ಕುಪತ್ರ ಇದ್ದಲ್ಲಿ ಅದರ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಹೆಚ್ಚಿನ ಮಾಹಿತಿ ತಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕ್ರಿಯಾಯೋಜನೆ ತಯಾರಿಗೆ ಮುನ್ನ ಅರ್ಜಿ ಸಲ್ಲಿಸಿ:
ಯುಕ್ತಧಾರ ತಂತ್ರಾಂಶದ ಮೂಲಕ 2026-27ನೇ ಸಾಲಿನ ಕ್ರಿಯಾಯೋಜನೆ ತಯಾರಿ ಸಿದ್ಧಪಡಿಸುವ ಬಗ್ಗೆ ಸರ್ಕಾರದಿಂದ ಸುತ್ತೋಲೆ ಬಂದಿದ್ದು, ಇದರಂತೆ ಕಾಮಗಾರಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ನ.20ರೊಳಗೆ ಅರ್ಜಿಯನ್ನು ಗ್ರಾಮ ಪಂಚಾಯತ್‌ಗೆ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ವಿವರವನ್ನು ದಾಖಲು ಮಾಡಬೇಕಿರುವುದರಿಂದ ಆರಂಭಿಕ ಹಂತದಲ್ಲೇ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿದವರ ವಿವರ ದಾಖಲಿಸಲಾಗುತ್ತದೆ. ಒಂದು ಬಾರಿ ಕ್ರಿಯಾಯೋಜನೆ ಮುಕ್ತಾಯ ಹಂತ ಮುಗಿದಲ್ಲಿ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಕ್ರಿಯಾಯೋಜನೆಗೆ ಸೇರಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ನ.20ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ.