ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ತತ್‌ಕ್ಷಣದಲ್ಲಿ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಗೆ ಸುಮಾರು 24,78,274 ರೂ ಸೈಬರ್ ವಂಚನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಆರೋಪಿ ವಾಸುದೇವ ಆರ್ (32) ಎಂಬಾತನನ್ನು ಬಂಧಿಸಿದ್ದಾರೆ.
ಈತ ಬೆಂಗಳೂರಿನ ಸುಂಕದಕಟ್ಟೆಯ ಶ್ರೀನಿವಾಸದಲ್ಲಿ ವಾಸಿಸುತ್ತಿದ್ದು, ಮೂಲತಃ ಯಶವಂತಪುರ ನಿವಾಸಿಯಾಗಿದ್ದಾನೆ. ಆತನಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್ ಫೋನ್, 20,300 ರೂ ನಗದು ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 1.6 ಲಕ್ಷ ರೂ ಆಗಿದೆ.
ಆರೋಪಿಯನ್ನು ನ.4ರಂದು ಬಂಧಿಸಿದ್ದು, 5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.