ಕೂಟ ಮಹಾಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ವೇದಿಕೆಯ ರಜತ ಸಂಭ್ರಮ ಆಚರಿಸಿತು.
ಅಧ್ಯಕ್ಷತೆಯನ್ನು ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಭಾರತಿ ಶ್ರೀಧರ್ ತುಂಬೆ ವಹಿಸಿದ್ದರು. ಅಧ್ಯಕ್ಷೆ ಉಷಾ ಪ್ರಭಾಕರ್ ಪ್ರಾಸ್ತಾವಿಕ ಮಾತನಾಡಿ, ವೇದಿಕೆ ನಡೆದುಬಂದ ದಾರಿ ಕುರಿತು ವಿವರಿಸಿದರು. ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಅಧ್ಯಕ್ಷ ಕೆ.ಎಸ್.ಕಾರಂತ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಶುಭ ಸಂದೇಶ ನೀಡಿದರು.
ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ.ಸುರೇಶ್ ತುಂಗ ರಜತದೀವಿಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ವೇದಿಕೆ ಚಟುವಟಿಕೆ ಶ್ಲಾಘಿಸಿದರು. ನಿವೃತ್ತ ಅಧ್ಯಾಪಕಿ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ದಿಕ್ಸೂಚಿ ಭಾಷಣ ಮಾಡಿ, ಹೆತ್ತವರು ಮಕ್ಕಳಿಗೆ ನೀಡಬೇಕಾದ ಸಂಸ್ಕಾರ, ಕುಟುಂಬದ ಸಾಮರಸ್ಯದ ಕುರಿತು ತಿಳಿಸಿ, ಸಮಾಜದ ಸ್ಥಿತಿಗತಿಗಳ ಕುರಿತು ಬೆಳಕು ಚೆಲ್ಲಿದರು. ವೇದಿಕೆಯ ಹಿಂದಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ವಿಶೇಷ ಸಾಧಕರಿಗೆ, 80 ವರ್ಷಕ್ಕೂ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಎಲ್ಲ ಆಹ್ವಾನಿತ ಅಂಗಸಂಸ್ಥೆಗಳ ಮಹಿಳಾ ವೇದಿಕೆಯ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಯಮುನಾ ಐಗಳ್ ಸ್ವಾಗತಿಸಿದರು. ಹೇಮಾ ಆರ್ ಮಯ್ಯ ಮತ್ತು ಸರಸ್ವತಿ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು. ಪವಿತ್ರಾ ವಿನಯ್ ಮಯ್ಯ ವಂದಿಸಿದರು. ಮಹಿಳಾ ವೇದಿಕೆ ಸದಸ್ಯರು ನಾರಿ ಶಕ್ತಿ ನಾಟ್ಯರೂಪಕ ಅಭಿನಯಿಸಿದರು.