ಬಂಟ್ವಾಳ

ನಮ್ಮೊಳಗಿನ ಮಗುವನ್ನು ಉಳಿಸಿಕೊಳ್ಳಬೇಕಾಗಿದೆ : ಲಕ್ಷ್ಮೀಶ ತೋಳ್ಪಾಡಿ – ಬಂಟ್ವಾಳ ಕನ್ನಡ ಭವನದಲ್ಲಿ ರಾಧೇಶ ತೋಳ್ಪಾಡಿ ರಚಿಸಿದ ಪುಟಾಣಿ ಕಿನ್ನರಿ ಕವಿತಾ ಲೋಕಾರ್ಪಣೆ

ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್. ಅವರು ರಚಿಸಿದ ಪುಟಾಣಿ ಕಿನ್ನರಿ ಕವಿತಾ ಎಂಬ ಮಕ್ಕಳ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಕನ್ನಡ ಭವನದಲ್ಲಿ  ಅಭಿರುಚಿ ಜೋಡುಮಾರ್ಗ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಬಂಟ್ವಾಳ ವತಿಯಿಂದ ನಡೆಯಿತು.

ಕೃತಿ ಲೋಕಾರ್ಪಣೆಗೊಳಿಸಿ, ಅವಲೋಕನ ಮಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಧರ ಎಚ್. ಜಿ. ಮಾತನಾಡಿ, ಕವನ ಸಂಕಲನದಲ್ಲಿ ಮಕ್ಕಳಿಗೆ ಇಷ್ಟವಾಗುವ ಭಾಷೆ ಮತ್ತು ವಸ್ತುವನ್ನು ಬಳಸಿದ್ದಾರೆ. ವಿಸ್ಮಯ, ಸಂಭ್ರಮ, ಸಂಕಟಗಳ ಸಹಿತ ಭಾವಗಳನ್ನು ನೇಯುವ ಕೆಲಸವನ್ನು ರಾಧೇಶ ತೋಳ್ಪಾಡಿ ಮಾಡಿದ್ದಾರೆ. ಮಕ್ಕಳ ಗೀತೆಯನ್ನು ದೃಶ್ಯಮಾಧ್ಯಮವಾಗಿ ಅಳವಡಿಸಿದರೆ, ಕವಿತೆಗಳು ಇಂದಿನ ನವಮಾಧ್ಯಮಗಳ ಮೂಲಕ ಮಕ್ಕಳನ್ನು ತಲುಪಲು ಸಾಧ್ಯವಾಗುತ್ತವೆ ಎಂದರು.

ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಮಕ್ಕಳ ಸಾಹಿತ್ಯವೆಂದರೆ ನಮ್ಮದೇ ಆದ ಮಾತುಗಳ ಪ್ರತಿಫಲನವಾಗಿದೆ. ನಮ್ಮೊಳಗಿನ ಮಗುವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು. ಅಪ್ಪ,ನನ್ನನ್ನು ಯಾರಿಗೆ ಕೊಡುತ್ತೀರಿ ಎಂದು ನಚಿಕೇತ ತನ್ನ ಅಪ್ಪನಲ್ಲಿ ಕೇಳುವ ಪ್ರಶ್ನೆ ಅತ್ಯುತ್ತಮ ಮಕ್ಕಳ ಸಾಹಿತ್ಯವೇ ಅಲ್ಲವೇ ಎಂದು ಪ್ರಶ್ನಿಸಿದ ಅವರು,ಪ್ರತಿಯೊಬ್ಬರೊಳಗೂ ಇರುವ ಮಗುವನ್ನು ಜಾಗೃತಗೊಳಿಸಬೇಕು, ನಾವು ಮುಗ್ಧತೆಯನ್ನು ಕಳೆದುಕೊಳ್ಳಬಾರದು. ಸಾಹಿತ್ಯದಲ್ಲಿ ಶ್ರೇಷ್ಠವಾದ ಮಕ್ಕಳ ಸಾಹಿತ್ಯವೆಂದರೆ ನಮ್ಮದೇ ಮಾತು, ನಮ್ಮದೇ ಸ್ವರದ ಅಭಿವ್ಯಕ್ತಿಯಾಗಿದೆ. ನಿಸರ್ಗ ಅವರದ್ದೇ ಆದ ಸ್ವರವನ್ನು ಪ್ರತಿಯೊಬ್ಬರಿಗೂ ಕೊಟ್ಟಿದೆ ಎಂದರು.

ಇಂದು ನಾಗರಿಕತೆಯ ಪ್ರಭಾವದಲ್ಲಿ ಮಕ್ಕಳು ಬೇಗ ದೊಡ್ಡವರಾಗುತ್ತಿದ್ದಾರೆ. ಮುಗ್ಧತೆಯನ್ನು ಬೇಗ ಕಳೆದುಕೊಳ್ಳುತ್ತಿದ್ದಾರೆ. ಮಗುವಿಗೆ ದ್ವಂದ್ವ ಇಲ್ಲ, ಕಲಬೆರಕೆ ಇಲ್ಲದ ಅನುಭವ ಬಾಲ್ಯದಲ್ಲಿ ಎಲ್ಲರಿಗೂ ದೊರಕಿದೆ. ಆದರೆ ದೊಡ್ಡವರಾದ ಬಳಿಕ ನಾವದನ್ನು ಕಳೆದುಕೊಳ್ಳುತ್ತೇವೆ. ವಿಚಿತ್ರ, ವಿಪರ್ಯಾಸಗಳಿದ್ದರೂ, ಎಲ್ಲ ವಿಷಮತೆ ನಡುವೆ ಬೆಳೆಯುವ ಸಾಮರ್ಥ್ಯ ಮಗುವಿಗಿದೆ. ಮನಸ್ಸೆಂದರೆ ಕನ್ನಡಿಯಲ್ಲಿ ಪೂರ್ವಾಗ್ರಹರಹಿತ ಚಿತ್ರಗಳನ್ನು ಮಗು ಕಾಣುತ್ತದೆ. ಹೀಗಾಗಿ ಮಕ್ಕಳ ಸಾಹಿತ್ಯದೆಡೆಗೆ ನಾವು ಸಾಗಬೇಕಾಗಿದೆ ಎಂದು ಹೇಳಿದರು.

ಕೃತಿಕಾರ ರಾಧೇಶ ತೋಳ್ಪಾಡಿ ಮಾತನಾಡಿ, ಕವನ ಸಂಕಲನದ ಕುರಿತು ತಿಳಿಸಿದರು. ಕವಿತೆಗಳಿಗೆ ರೇಖಾಚಿತ್ರ ರಚಿಸಿದ ಸಜೀಪಮೂಡ ಪ್ರೌಢಶಾಲಾ ವಿಭಾಗದ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಶೀನಾ ನಾಡೋಳಿ ಹಾಗೂ  ಕೀರ್ತನಾ ಸಂಗೀತ ಶಾಲೆ ಮಾಣಿಮಜಲಿನ ವಿದ್ಯಾರ್ಥಿಗಳು ಮಕ್ಕಳ ಕವಿತೆಗಳನ್ನು ಹಾಡಿದರು. ಅಭಿರುಚಿ ಜೋಡುಮಾರ್ಗ ಅಧ್ಯಕ್ಷ ದಾಮೋದರ್ ಸ್ವಾಗತಿಸಿದರು. ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜಿನ ಪಂಜೆ ಸಾಹಿತ್ಯ ಸಂಘದ ವಿದ್ಯಾರ್ಥಿಗಳು ಸಹಕರಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.