ಕುಡಿಯುವ ನೀರು ಸರಬರಾಜು ಅವ್ಯವಸ್ಥೆ, ಫ್ಲೈಓವರ್, ಸರ್ಕಲ್ ಬಳಿ ಸಮಸ್ಯೆ, ಬೀದಿ ನಾಯಿ ಕಾಟ, ಅಕ್ರಮ ಗೂಡಂಗಡಿ, ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಕಾಮಗಾರಿ ನಡೆಸುವ ವಿಚಾರ ಶನಿವಾರ ಬಂಟ್ವಾಳ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೊಳಗಾದವು.
ಬಂಟ್ವಾಳ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಬಂಧಪಟ್ಟ ಕಡತಗಳು ಲಭ್ಯವಿಲ್ಲದ ಕಾರಣ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಗರ ನೀರು ಸರಬರಾಜು ಸಮರ್ಪಕ ನಿರ್ವಹಣೆ ಆಗದೇ ಇರುವ ಲೋಪದೋಷಗಳ ಬಗ್ಗೆ ಮಂಡಳಿ ಅಧಿಕಾರಿಗಳನ್ನು ಕರೆದು ಮುಖ್ಯಾಧಿಕಾರಿ ಸಮ್ಮುಖ ಸಭೆ ನಡೆಸುವುದು ಹಾಗೂ ಸಭೆಯು ಕಾರ್ಯರೂಪಕ್ಕೆ ಬಾರದೇ ಇದ್ದ ಪಕ್ಷದಲ್ಲಿ ಮಂಡಳಿಯಿಂದ ಕಡತಗಳನ್ನು ತರಿಸಿಕೊಂಡು ಸಮಗ್ರ ನೀರು ಸರಬರಾಜು ಲೋಪದೋಷಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಒಳಪಡಿಸಲು ಕಳೆದ ಸಭೆಯಲ್ಲೇ ನಿರ್ಣಯಿಸಲಾಗಿತ್ತು. ಆದರೆ ಶಾಸಕ ರಾಜೇಶ್ ನಾಯ್ಕ್ ಸಮ್ಮುಖ ಸಭೆ ನಡೆದಿದ್ದು, ಇದು ತಮ್ಮ ಅವಗಾಹನೆಗೆ ಬಂದಿಲ್ಲ. ಅಧ್ಯಕ್ಷರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸದಸ್ಯರಾದ ಸಿದ್ಧೀಕ್ ಗುಡ್ಡೆಯಂಗಡಿ ಒತ್ತಾಯಿಸಿದರು. ಈ ಸಂದರ್ಭ ಉತ್ತರಿಸಿದ ಅಧ್ಯಕ್ಷ ವಾಸು ಪೂಜಾರಿ, ನೀರು ಸರಬರಾಜು ಅವ್ಯವಸ್ಥೆ ಕುರಿತು ಸಾಕಷ್ಟು ದೂರುಗಳು ಬಂದಿರುವ ಕಾರಣ ಲೋಕಾಯುಕ್ತಕ್ಕೆ ಇದೇ ತಿಂಗಳ 28ರೊಳಗೆ ದೂರು ನೀಡುವುದಾಗಿ ತಿಳಿಸಿದರು.
ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ:
ಅಧ್ಯಕ್ಷರು ಉಸ್ತುವಾರಿ ಮಂತ್ರಿಗಳ ರೀತಿ ವರ್ತಿಸುತ್ತಿದ್ದಾರೆ, ಸದಸ್ಯರನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ, ನಮ್ಮ ವಾರ್ಡಿನಲ್ಲಿ ನಡೆದ ಕಾಮಗಾರಿ ಅರ್ಧಂಬರ್ಧ ನಡೆದ ಬಳಿಕ ದೂರುಗಳು ನಮಗೆ ಬರುತ್ತವೆ ಎಂದು ಆಡಳಿತ ಪಕ್ಷದ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ದೂರಿದರೆ, ಇದನ್ನು ಅನುಮೋದಿಸಿದ ಸದಸ್ಯರಾದ ಮಹಮ್ಮದ್ ಶರೀಫ್, ಲುಕ್ಮಾನ್, ಇದ್ರೀಸ್ ಹಾಗೂ ಝೀನತ್ ಫಿರೋಜ್, ಗೂಡಿನಬಳಿ, ಪಾಣೆಮಂಗಳೂರು ಸಹಿತ ತಮ್ಮ ವಾರ್ಡ್ ಗಳಲ್ಲಿ ಕೆಲಸಕಾರ್ಯಗಳು ನಡೆಯುವ ವೇಳೆ ಹಾಗೂ ದೂರುಗಳು ಬಂದಾಗ ತಮ್ಮ ಗಮನಕ್ಕೆ ಬರುವುದೇ ಇಲ್ಲ ಎಂದರು.
ವಿರೋಧ ಪಕ್ಷದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಮಾತನಾಡಿ, ಪುರಸಭಾ ಕಾರ್ಯವೈಖರಿಯನ್ನು ಟೀಕಿಸಿದರು. ಬಿಜೆಪಿ ಸದಸ್ಯೆ ಶಶಿಕಲಾ ಮಾತನಾಡಿ, ವಾರ್ಡಿನ ಸದಸ್ಯರಾಗಿ ಕೆಲಸ ಕಾರ್ಯಗಳನ್ನು ನಾನು ಮಾಡಿಸಿದ್ದೇನೆ ಆದರೆ, ಅಧ್ಯಕ್ಷರನ್ನು ಸನ್ಮಾನಿಸಲಾಯಿತು ಎಂದರು. ಸದಸ್ಯರ ಸಹಿ ತೆಗೆದುಕೊಳ್ಳದೆ ಬಿಲ್ ಮಾಡುವುದು ಯಾಕೆ ಎಂದು ಲುಕ್ಮಾನ್ ಪ್ರಶ್ನಿಸಿ ಯಾವುದೇ ಸಮಸ್ಯೆ ಕುರಿತ ದೂರುಗಳು ಬಂದಾಗ ಅಧ್ಯಕ್ಷರು ವಾರ್ಡಿಗೆ ಬರುವಾಗ ಅಧ್ಯಕ್ಷರಾಗಲೀ, ಉಪಾಧ್ಯಕ್ಷರಾಗಲೀ ನಮ್ಮ ಗಮನಕ್ಕೆ ತರಬೇಕು ಸಾರ್ವಜನಿಕರು ನೇರವಾಗಿ ಪುರಸಭೆ ಸಂಪರ್ಕಿಸುವ ವೇಳೆ ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು – ಎಂದು ಲುಕ್ಮಾನ್ ಹೇಳಿದರು. ಒಂದು ಹಂತದಲ್ಲಿ ಬಿಜೆಪಿ ಹಿರಿಯ ಸದಸ್ಯ ಗೋವಿಂದ ಪ್ರಭು ಅವರನ್ನು ಬೆಂಬಲಿಸಿದ ಆಡಳಿತ ಪಕ್ಷದ ಸದಸ್ಯ ಸಿದ್ದೀಕ್, ಅವರು ಹೇಳುವುದೆಲ್ಲವೂ ಸತ್ಯ ಎಂದರು.
ಅನಧಿಕೃತ ವ್ಯಾಪಾರ ತೆರವುಗೊಳಿಸಿ:
ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ಸುತ್ತಮುತ್ತಲೂ ಅನಧಿಕೃತ ವ್ಯಾಪಾರ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದಿಲ್ಲವೇಕೆ ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದರು. ಅಲ್ಲಿ ಅಪಘಾತವೇನಾದರೂ ಆದರೆ ನಾವು ಧಾವಿಸಬೇಕಾಗುತ್ತದೆ. ಮೊದಲೇ ಹೆದ್ದಾರಿ ಅಗಲವಿಲ್ಲ. ಅದನ್ನು ಅಗಲಗೊಳಿಸಿ, ಅತಿಕ್ರಮಣ ತೆರವುಗೊಳಿಸಿ ಎಂದು ಹೇಳಿದಾಗ, ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಮಾತನಾಡಿ, ಸದಸ್ಯರು ಸಹಕರಿಸಿದರೆ, ಮಾಡುತ್ತೇವೆ ಎಂದರು. ಇದಕ್ಕೆ ಸದಸ್ಯ ಹರಿಪ್ರಸಾದ್ ಸಹಿತ ಎಲ್ಲ ಸದಸ್ಯರೂ ಒಮ್ಮತದಿಂದ ಅನಧಿಕೃತ ತೆರವು ಕಾರ್ಯಾಚರಣೆಗೆ ತಮ್ಮ ಬೆಂಬಲ ಸೂಚಿಸಿದರು.
ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ ಬ್ಲಾಕ್ ಲಿಸ್ಟ್ ನಲ್ಲಿರುವ ಗುತ್ತಿಗೆದಾರರಿಗೆ ಅವಕಾಶ ಹೇಗೆ ಕೊಟ್ಟಿರಿ ಎಂದು ಮಹಮ್ಮದ್ ಶರೀಫ್ ಕೆಂಡಾಮಂಡಲವಾದರು. ಇದನ್ನು ವಿರೋಧಿಸಿದ ಹರಿಪ್ರಸಾದ್, ಅವರು ಬ್ಲಾಕ್ ಲಿಸ್ಟ್ ನಲ್ಲಿದ್ದಾರಾ ಎಂದು ಪ್ರಶ್ನಿಸಿದಾಗ, ಕಪ್ಪು ಪಟ್ಟಿ ಸೇರಿಸಿದ್ದರೆ, ಅದರ ಪ್ರತಿ ನೀಡಲು ಅಧ್ಯಕ್ಷ ವಾಸು ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ನೀವು ಕುಳಿತ ಮೊದಲ ಮೀಟಿಂಗ್ ನಲ್ಲೇ ಹಿಟಾಚಿ ಡ್ರೈವರ್ ನೇಮಿಸಬೇಕು ಎಂದು ಹೇಳಿ ಇದುವರೆಗೂ ಆಗಲಿಲ್ಲ. ಹೀಗಿದ್ದ ಮೇಲೆ ಮೀಟಿಂಗ್ ಮಾಡಿ ಏನು ಪ್ರಯೋಜನ ಎಂದು ಹರಿಪ್ರಸಾದ್ ಪ್ರಶ್ನಿಸಿದರು. ಹಲವು ವಿಷಯಗಳ ಕುರಿತು ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಜೆಸಿಂತಾ ಮತ್ತಿತರರು ಮಾತನಾಡಿದರು. ಉಪಾಧ್ಯಕ್ಷ ಮೊನೀಶ್ ಆಲಿ ಈ ಸಂದರ್ಭ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಮತ್ತಡಿ ಸ್ವಾಗತಿಸಿ, ವಂದಿಸಿದರು.