ಕಾರಣಿಕದ ಕ್ಷೇತ್ರವಾಗಿರುವ ಬಂಟ್ವಾಳ ತಾಲೂಕಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಶುಕ್ರವಾರ ಪುದ್ದಾರ್ ಅಗೇಲು ಸೇವೆ ನಡೆಯಿತು. ಒಟ್ಟು 1486 ಸೇವೆಗಳು ಸಂಪನ್ನಗೊಂಡವು.
ಪ್ರತಿ ವರ್ಷ ಕಾವೇರಿ ಸಂಕ್ರಮಣದಂದು ಕ್ಷೇತ್ರದಲ್ಲಿ ಹೊಸ ಅಕ್ಕಿಯ ಅಗೇಲು ಸೇವೆ ನಡೆಯುತ್ತದೆ. ಊರ, ಪರವೂರ ಭಕ್ತರು ಪುದ್ದಾರ್ ಸೇವೆಗೆಂದು ಆಗಮಿಸುತ್ತಾರೆ. ಹಲವಾರು ಬಗೆಯ ತರಕಾರಿಗಳಿಂದ ತಯಾರಿಸಿದ ನೈವೇದ್ಯದೊಂದಿಗೆ ಹೊಸ ಅಕ್ಕಿಯ ಅನ್ನದ ಸೇವೆ ಸಮರ್ಪಣೆ ವಿಶೇಷ. ಭಾನುವಾರ, ಮಂಗಳವಾರ ಮತ್ತು ಶುಕ್ರವಾರ ಅಗೇಲು ಸೇವೆ ನಡೆಯುವ ಈ ಕ್ಷೇತ್ರದಲ್ಲಿ ಕಾವೇರಿ ಸಂಕ್ರಮಣ ವಾರದ ಮಧ್ಯೆ ಬಂದರೆ ವಿಶೇಷವಾಗಿರುತ್ತದೆ. ಅದರಲ್ಲೂ ಶುಕ್ರವಾರ ಕಾವೇರಿ ಸಂಕ್ರಮಣವಾಗಿದ್ದು, ಇಂದು ಭಕ್ತಾದಿಗಳು ಆಗಮಿಸಿ ಸೇವೆ ಸಲ್ಲಿಸಿದರು. ದೈವಸ್ಥಾನದ ಪ್ರಮುಖರು, ಸಿಬ್ಬಂದಿ ಈ ಸಂದರ್ಭ ಹಾಜರಿದ್ದು, ಪೂರಕ ವ್ಯವಸ್ಥೆ ಕಲ್ಪಿಸಿದರು.