ಬಂಟ್ವಾಳ ತಾಲೂಕು ಸಹಕಾರ ಭಾರತಿಯ ಸಭೆ ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಅಕ್ಟೋಬರ್ 15 ನೇ ಬುಧವಾರ ನಡೆಯಿತು.
ಸಭೆಯಲ್ಲಿ ಸಹಕಾರ ಭಾರತಿಯ ಪ್ರಧಾನ ರಾಜ್ಯ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ , ದ.ಕ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷರಾದ ಬಿ ಸುಧಾಕರ ರೈ, ಬೋಳಂತೂರು ಹಾಗೂ ಜಿಲ್ಲಾ ಮಹಿಳಾ ಪ್ರಮುಖರಾದ ಸುಭದ್ರ ರಾವ್ ಭಾಗವಹಿಸಿದ್ದರು.
ಬಂಟ್ವಾಳ ಸಹಕಾರ ಭಾರತಿಯ ನೂತನ ಅಧ್ಯಕ್ಷರಾಗಿ ನೇರಳೆ ಕಟ್ಟೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪುಷ್ಪರಾಜ ಚೌಟ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳ ಸಮಾಜಸೇವಾ ಬ್ಯಾಂಕಿನ ನಿರ್ದೇಶಕರಾದ ಅರುಣ್ ಕುಮಾರ್ ಸಜಿಪ ಹಾಗೂ ತಾಲೂಕು ಮಹಿಳಾ ಪ್ರಮುಖರಾಗಿ ಪುದು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಶಾಂತಾ ಚೌಟ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸಾಣೂರು ನರಸಿಂಹ ಕಾಮತ್ ರವರು ಮಾತನಾಡುತ್ತಾ, ಸಹಕಾರಿ ಕ್ಷೇತ್ರದಲ್ಲಿ ದೇಶದ ಏಕೈಕ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿ ಕಳೆದ 46 ವರ್ಷಗಳಿಂದ ಸಂಘಟನಾತ್ಮಕವಾಗಿ ದೇಶದ 650 ಜಿಲ್ಲೆಗಳಲ್ಲಿ ಮತ್ತು ಕರ್ನಾಟಕ ರಾಜ್ಯದ 32 ಜಿಲ್ಲೆ ಮತ್ತು 3 ಮಹಾನಗರಗಳಲ್ಲಿ ಸಹಕಾರಿ ಸಂಘಗಳ ಶ್ರಯೋಭಿವೃದ್ಧಿಗಾಗಿ ಸಕ್ರಿಯವಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ರಚನೆಯಾಗಿರುವ ನೂತನ ಸಮಿತಿಯ ಪದಾಧಿಕಾರಿಗಳು ಸರ್ವ ವ್ಯಾಪಿ ಸರ್ವಸ್ಪರ್ಶಿಯಾಗಿ ಸಂಘಟನಾತ್ಮಕ ಚಟುವಟಿಕೆಗಳನ್ನು ಮುನ್ನಡೆಸಬೇಕೆಂದು ಕರೆ ನೀಡಿದರು.
ಸಹಕಾರ ಭಾರತಿಯ ಬಹುಕಾಲದ ಬೇಡಿಕೆಯಾದ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಮತ್ತು ಹೊಸ ಸಹಕಾರಿ ನೀತಿ ದೇಶದಲ್ಲಿ ಜಾರಿಯಾಗಿದ್ದು, ತ್ರಿಭುವನ್ ಸಹಕಾರಿ ವಿಶ್ವವಿದ್ಯಾನಿಲಯವು ಕೂಡ ಅಸ್ತಿತ್ವಕ್ಕೆ ಬಂದಿದ್ದು, ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಯುವಜನತೆ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗುವ ಮೂಲಕ ಹೊಸ ತಂತ್ರಜ್ಞಾನದ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು. ಜಿಲ್ಲಾಧ್ಯಕ್ಷರಾದ ಸುಧಾಕರ್ ರೈ ಬಂಟ್ವಾಳ ತಾಲೂಕಿನ ಸಹಕಾರ ಭಾರತಿಯ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ತಾಲೂಕಿನ ಎಲ್ಲಾ ಸಹಕಾರ ಸಂಘಗಳನ್ನು ಸಂಪರ್ಕಿಸಿ ಸಹಕಾರ ಭಾರತಿಯ ಸದಸ್ಯತಾ ಅಭಿಯಾನ, ಅಭ್ಯಾಸ ವರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ವಿಶ್ವನಾಥ ಎಂ ಕಾರ್ಯಕ್ರಮ ನಿರೂಪಿಸಿ, ನೂತನ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ರವರು ವಂದನಾರ್ಪಣೆಗೈದರು.