ರಸರಾಗಚಕ್ರವರ್ತಿ ದಿನೇಶ್ ಅಮ್ಮಣ್ಣಾಯರು ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರ ಅಗಲಿಕೆ ಅಸಂಖ್ಯ ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಕುರಿತು ಹಿರಿಯ ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಫೇಸ್ ಬುಕ್ ನಲ್ಲಿ ಅಮ್ಮಣ್ಣಾಯರ ಬಗ್ಗೆ ಹೀಗೆ ಬರೆದಿದ್ದಾರೆ.
ಯಕ್ಷಗಾನದ ಸುಪ್ರಸಿದ್ಧ ಭಾಗವತ ದಿನೇಶ ಅಮ್ಮಣ್ಣಾಯರು ಇನ್ನಿಲ್ಲ ಎಂಬ ಸುದ್ದಿ ಕೇಳಿದೆ. ಶೂನ್ಯ ವಾತಾವರಣದ ಅನುಭವ.
PHOTO COURTESY: SHARMA NEERCHAL
ಯಕ್ಷಗಾನದ ಸುಪ್ರಸಿದ್ಧ ಭಾಗವತ ದಿನೇಶ ಅಮ್ಮಣ್ಣಾಯರು ಇನ್ನಿಲ್ಲ ಎಂಬ ಸುದ್ದಿ ಕೇಳಿದೆ.ಶೂನ್ಯ ವಾತಾವರಣದ ಅನುಭವ.
ನಿರೀಕ್ಷಿತವಾಗಿದ್ದರೂ ಕೆಲವು ಸಾವುಗಳು ಗಾಢವಾದ ವಿಷಣ್ಣತೆಯನ್ನು ಹುಟ್ಟಿಸಿಬಿಡುತ್ತವೆ.
ಅಮ್ಮಣ್ಣಾಯರ ಅಗಲಿಕೆಯು ಅಂತಹ ವಿಷಣ್ಣತೆಗೆ ಕಾರಣವಾಗಿದೆ.
ಅವರು ನಮ್ಮ ಊರಿನವರು. ಬಹುಕಾಲದಿಂದ ಯಕ್ಷಗಾನ ಭಾಗವತರಾಗಿ ಹಾಡುತ್ತ, ತಮ್ಮ ಸ್ವರಮಾಧುರ್ಯದಿಂದ ಅಸಂಖ್ಯ ಶ್ರೋತೃಗಳನ್ನು ಆಕರ್ಷಿಸಿದವರು.
ಹಾಡುವುದು ಅವರಿಗೆ ಸಹಜತೆಯಾಗಿತ್ತು. ಅದಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದರು.
ನಾನು ಎಳೆಯವನಾಗಿದ್ದಾಗ, ಆಗ ತುಂಬು ಜವ್ವನಿಗರಾಗಿದ್ದ ಅಮ್ಮಣ್ಣಾಯರು, ಪಂಜ, ಬಳ್ಪ, ಕೇನ್ಯ ಮುಂತಾದ ಹಳ್ಳಿಗಳಲ್ಲಿ ಸಂಘದ ತಾಳಮದ್ದಲೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಭಾಗವತಿಕೆಯಲ್ಲಿ ತುಂಬ ಅರ್ಥಗಳನ್ನು ಹೇಳಿದ್ದೇನೆ. ಅವರ ರಾಗಾಲಾಪದ ಸವಿಯಲ್ಲಿ ಕಳೆದು ಹೋಗಿದ್ದೇನೆ.
ಮಿತ ಮಾತಿನ, ಹಿತ ವರ್ತನೆಯ ಸೌಮ್ಯ ವ್ಯಕ್ತಿ ದಿನೇಶ ಅಮ್ಮಣ್ಣಾಯರ ಅಗಲಿಕೆ ಬಹುಕಾಲ ನಮ್ಮನ್ನು ಕಾಡುವುದು. ಒಂದು ತಲೆಮಾರಿನ ಮೂವರು ಅಗ್ರಪಂಕ್ತಿಯ ಭಾಗವತರು (ದಿನೇಶ ಅಮ್ಮಣ್ಣಾಯ,ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ) ಯಕ್ಷಗಾನದ ಪಾರಂಪರಿಕ ಶೈಲಿಗೆ ಬದ್ಧರಾಗಿದ್ದುಕೊಂಡೇ ಸ್ವಂತಿಕೆಯ ಹಾಡುಗಾರಿಕೆಯನ್ನು ವಿಸ್ತರಿಸಿದವರು. ಕೆಲವು ದಶಕಗಳ ಕಾಲ ರಂಗಭೂಮಿಯಲ್ಲಿ ಮೆರೆದ ಅವರ ಕೊಡುಗೆಯು, ಯಕ್ಷಗಾನ, ತಾಳಮದ್ದಲೆ ರಂಗಭೂಮಿಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವಲ್ಲಿ ವಿಶೇಷವಾಗಿ ಗಮನಾರ್ಹ ಆದರ್ಶವಾಗಿದೆ.
ಹಳೆಯ ಚೌಕಟ್ಟಿನಲ್ಲಿ ಹೊಸತನ್ನು ತರುವುದಕ್ಕೆ ಉತ್ಕೃಷ್ಟ ಮಾದರಿಯನ್ನು ಈ ಮೂವರು ನಿರ್ಮಿಸಿದರು.
(ಸ್ಥೂಲವಾಗಿ ಮಂಡೆಚ್ಚ, ಅಗರಿ, ಬಲಿಪ ಎಂಬ ಹಿರಿಯ ಭಾಗವತರ ಶೈಲಿಯ ಮುಂದುವರಿಕೆಯಾಗಿ ಭಾಗವತಿಕೆಯನ್ನು ಕಾಣಿಸಿದರು ಎನ್ನಬಹುದೇನೋ)
ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತೊಡಗುತ್ತಿದ್ದರೆ ಇನ್ನೂ ವಿಸ್ತಾರವಾದ ಕೀರ್ತಿ ಅವರಿಗೆ ಬರುತ್ತಿತ್ತು. ಆದರೆ ಅವರು ಯಕ್ಷಗಾನಕ್ಕೆ ಒಲಿದುದು ರಂಗಭೂಮಿಯ ಭಾಗ್ಯ.
ತೀರ ಇತ್ತೀಚೆಗೆ ಚೌತಿಯ ಸಂದರ್ಭದಲ್ಲಿ ದೊಂಡೋಲೆ ಮನೆಯಲ್ಲಿ ಅವರನ್ನು ಕಂಡು ಮಾತನಾಡಿಸಿದಾಗ, ಮತ್ತೆ ಅವರನ್ನು ನೋಡುತ್ತೇನೋ ಇಲ್ಲವೋ ಎಂದು ಆತಂಕವಾಗಿತ್ತು. ಅದೇ ಸತ್ಯವಾಗಿಹೋಯಿತು.
ಅಮ್ಮಣ್ಣಾಯರು ಅನಂತದ ಅವಕಾಶದಲ್ಲಿ ತಮ್ಮ ಕಂಠಸ್ವರವನ್ನು ಪಸರಿಸುತ್ತ ಶಾಶ್ವತ ಸ್ಮೃತಿಯಾಗಿದ್ದಾರೆ.