ಪ್ರಮುಖ ಸುದ್ದಿಗಳು

ಹೃದಯದಲ್ಲಿ ದಿನೇಶ್ ಅಮ್ಮಣ್ಣಾಯರು ಶಾಶ್ವತ : ಅಗಲಿದ ಭಾಗವತರಿಗೆ ಕಂಬನಿ ಮಿಡಿದ ಅಭಿಮಾನಿಗಳು

ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ತನ್ನ ಅಪ್ರತಿಮ ಕಂಠಸಿರಿಯ ಮೂಲಕ ಗಾನಕೋಗಿಲೆ, ರಸರಾಗಚಕ್ರವರ್ತಿ ಎಂದೇ ಬಿರುದು ಪಡೆದಿದ್ದ ದಿನೇಶ್ ಅಮ್ಮಣ್ಣಾಯ (68) ಗುರುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಹೊಸ್ತೋಟ ಪಾಳ್ಯ ನಿವಾಸಿಯಾಗಿರುವ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕೆಲ ಕಾಲದಿಂದ ತೀವ್ರ ಅಸೌಖ್ಯದಿಂದಿದ್ದ ಅವರು, ಇಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದ್ದಾರೆ. ಕರ್ನಾಟಕ ಮೇಳ, ಎಡನೀರು ಮೇಳ ಸಹಿತ ತೆಂಕುತಿಟ್ಟಿನ ಪ್ರಖ್ಯಾತ ಮೇಳಗಳಲ್ಲಿ ಭಾಗವತರಾಗಿ ಜನಪ್ರಿಯರಾಗಿದ್ದ ಅವರು ಭಾವಪ್ರಧಾನ ಪ್ರಸಂಗಗಳ ಗಾಯನಕ್ಕೆ ಹೆಸರುವಾಸಿಯಾಗಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಅವರ ನಿಧನಕ್ಕೆ ಅಪಾರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ವಿವರಗಳು ಹೀಗಿವೆ.

ಗಾನಕೋಗಿಲೆ, ರಸರಾಗಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

ಜಾಹೀರಾತು

ಪೊಳಲಿ ಯಕ್ಷಕಲಾ ಎಂಬ ಸಂಸ್ಥೆ ಸ್ಥಾಪನೆಯಾಗಲು ಕಾರಣವೇ ದಿನೇಶ್ ಅಮ್ಮಣ್ಣಾಯರು. ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಅವರು ಪೊಳಲಿಯ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎಂದು ಸಂಸ್ಥೆಯ ಜನಾರ್ದನ ಅಮ್ಮುಂಜೆ ನೆನಪಿಸಿಕೊಳ್ಳುತ್ತಾರೆ.

ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಲ್ಲಿ ಓರ್ವರಾಗಿದ್ದ ದಿನೇಶ ಅಮ್ಮಣ್ಣಾಯ (66) ಇಂದು (16.10.2025) ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ದಾಮೋದರ ಮಂಡೆಚ್ಚ ಮತ್ತು ಹರಿನಾರಾಯಣ ಬೈಪಡಿತ್ತಾಯರಿಂದ ಅನುಕ್ರಮವಾಗಿ ಭಾಗವತಿಕೆ ಮತ್ತು ಹಿಮ್ಮೇಳವಾದನ ಅಭ್ಯಾಸ ಮಾಡಿ ಪುತ್ತೂರು ಮೇಳದಲ್ಲಿ ಹಿಮ್ಮೇಳ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ದೀರ್ಘಕಾಲ (21 ವರ್ಷ) ಕರ್ನಾಟಕ ಮೇಳದಲ್ಲಿ, ಕದ್ರಿ, ಎಡನೀರು, ಕುಂಟಾರು ಮೇಳಗಳಲ್ಲಿ ಒಟ್ಟೂ ಸುಮಾರು ನಾಲ್ಕು ದಶಕಗಳ ಕಲಾಸೇವೆ ಗೈದಿದ್ದರು. ಎಡನೀರು ಮಠದ ಭಕ್ತರಾಗಿದ್ದ ಅಮ್ಮಣ್ಣಾಯರು ಸ್ವಾಮೀಜಿದ್ವಯರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದರು. ಅಲ್ಲಿ ನಡೆಯುವ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗ ವಹಿಸುತ್ತಿದ್ದರು. ತಮ್ಮ ಸುಮಧುರ ಕಂಠ ಮಾಧುರ್ಯ ಮತ್ತು ರಾಗಸಂಯೋಜನೆಯಿಂದ ಮಾನಿಷಾದ, ಸತ್ಯ ಹರಿಶ್ಚಂದ್ರ, ಕಾಡ ಮಲ್ಲಿಗೆ, ಪಟ್ಟದ ಪದ್ಮಲೆ ಸೇರಿದಂತೆ ಹಲವು ಕನ್ನಡ, ತುಳು ಪ್ರಸಂಗಗಳನ್ನು ಪರಿಣಾಮಕಾರಿಯಾಗಿ ಹಾಡಿ ಕಲಾರಸಿಕರ ಮನ ಗೆದ್ದಿದ್ದರು. ಕರುಣರಸ ಪ್ರಸ್ತುತಿಯಲ್ಲಿ ಅಸಾಧಾರಣ ಸಿದ್ಧಿ ಪ್ರಸಿದ್ಧಿ ಪಡೆದಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಸಂಸ್ಥೆ ಐದು ವರ್ಷದ ಹಿಂದೆ ಮಲ್ಪೆ ಶಂಕರನಾರಾಯಣ ಸಾಮಗರ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ಸೂಚಿಸಿದ್ದಾರೆ.

ತೆಂಕುತ್ತಿಟ್ಟು ಭಾಗವತಿಕೆಯ ಅಗ್ರಮಾನ್ಯ ಭಾಗವತರಲ್ಲಿ ಒಬ್ಬರಾಗಿ, ತನ್ನಕಂಠಸಿರಿಯಿಂದ ಅಪಾರ ಅಭಿಮಾನಿಗಳ ಮನಸ್ಸಿನಲ್ಲಿ ಮನೆಮಾಡಿದ ,ನಮ್ಮ ಭ್ರಾಮರೀ ಯಕ್ಷವೈಭವದ ಹಲವಾರು ಯಕ್ಷಗಾನಕ್ಕೆ ಭಾಗವತಿಕೆ ಮಾಡಿ ಆ ಪ್ರಸಂಗದ ಯಶಸ್ವಿಗೆ ಕಾರಣಕರ್ತರಾದ ರಸರಾಗ ಚಕ್ರವರ್ತಿ ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯರು ನಮ್ಮನ್ನು ಅಗಲಿದ್ದಾರೆ.ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕೋರುತ್ತ .ಅವರ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಅವರ ಮನೆಯವರಿಗೆ ಅಪಾರ ಅಭಿಮಾನಿಗಳಿಗೆ ಶ್ರೀ ದೇವರು ನೀಡಲಿ ಎಂಬುದು ಮನದ ಪ್ರಾರ್ಥನೆ ಎಂದು ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.