ಅಟೋ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೋಳಂತೂರು ನಿವಾಸಿ ಜಬ್ಬಾರ್ (35) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಿಸಿರೋಡು ಕಡೂರು ರಾಷ್ಟ್ರೀಯ ಹೆದ್ದಾರಿಯ ಗಾಣದಪಡ್ಪು ಎಂಬಲ್ಲಿ ಮಂಗಳವಾರ ನಡೆದಿದೆ.
ಅವಿವಾಹಿತರಾಗಿರುವ ಜಬ್ಬಾರ್ ಅವರು ಗಾಣದಪಡ್ಪು ಶಿವಗಣೇಶ್ ಬ್ಯಾಟರಿ ಅಂಗಡಿಯ ಕಾರ್ಮಿಕನಾಗಿದ್ದರು. ಅಟೋ ಇಲೆಕ್ಟ್ರಿಕಲ್ ಉದ್ಯೋಗಿಯಾಗಿದ್ದ ಅವರು ಶನಿವಾರ ಬೆಳಿಗ್ಗೆ ಗಾಣದಪಡ್ಪು ಹೆದ್ದಾರಿಯ ಬದಿಯಲ್ಲಿ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದರು. ಈ ಸಂದರ್ಭ, ವ್ಯಕ್ತಿಯೋರ್ವ ಚಲಾಯಿಸುತ್ತಿದ್ದ ಕಾರು ಬಂಟ್ವಾಳ ಬೈಪಾಸ್ ಕಡೆಯಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜಬ್ಬಾರ್ ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ಏಟಿನಿಂದ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿದರು.