ಬಂಟ್ವಾಳ ದರ್ಬೆಯ ಯಕ್ಷಕಾವ್ಯ ತರಂಗಿಣಿ ಭಾಗವತ ದಿ.ಚಂದಪ್ಪ ಪೂಜಾರಿ ಪ್ರತಿಷ್ಠಾನ (ರಿ) ವತಿಯಿಂದ ದ್ವಿತೀಯ ವಾರ್ಷಿಕ ಮಹೋತ್ಸವ ಸಲುವಾಗಿ ಯಕ್ಷ ಬೊಳ್ಳಿ ಬೊಲ್ಪು ಕಾರ್ಯಕ್ರಮ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಅಶಕ್ತ ಕುಟುಂಬಗಳಿಗೆ ನೆರವು, ವಿದ್ಯಾರ್ಥಿಗಳಿಗೆ ಮತ್ತು ಯಕ್ಷಗಾನ ಕಲಾವಿದರಿಗೆ ಗೌರವಧನ, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬಂಟ್ವಾಳ ಬೈಪಾಸ್ ಜಂಕ್ಷನ್ ನ ಲೆಕ್ಕೇಸಿರಿಪಾದೆ ಶ್ರೀ ದೇವಿನಗರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಕಾರ್ಯಕ್ರಮಗಳು ಇಡೀ ದಿನ ನಡೆಯಲಿವೆ ಎಂದು ಸಮಿತಿ ಅಧ್ಯಕ್ಷೆ ಸಂಧ್ಯಾ ಪೂಜಾರಿ ದರ್ಬೆ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಭಾಗವತ ಶಿವರಾಮ ಪಣಂಬೂರು ಅವರಿಗೆ ಪ್ರಶಸ್ತಿ ಸಹಿತ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ. ಉದಯೋನ್ಮುಖರಿಂದ ಯಕ್ಷಗಾನಾರ್ಚನೆ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ, ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ, ಅಶಕ್ತರಿಗೆ ನೆರವು ಸಹಿತ ಕಲಾವಿದರು ಹಾಗೂ ಸಾಮಾಜಿಕ ಕೆಲಸಕಾರ್ಯಗಳನ್ನು ಭಾಗವತ ದಿ.ಚಂದಪ್ಪ ಪೂಜಾರಿ ನೆನಪಿನಲ್ಲಿ ಮಾಡಲಿದ್ದೇವೆ ಎಂದರು. ಮಧ್ಯಾಹ್ನ 2ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9ರಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಸಭಾ ಕಾರ್ಯಕ್ರಮದ ಬಳಿಕ ಕಾರಿಂಜ ಕಾಂಜವ ತುಳು ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಸುಶಾಂತ್ ಕೈಕಂಬ, ಕಾರ್ಯದರ್ಶಿ ಸಂಜೀವ ಕಜೆಪದವು, ಹಾಗೂ ಮೋಹನ್ ಆಲಂಗಾರು ಉಪಸ್ಥಿತರಿದ್ದರು.