ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ರಾಮಲ್ ಕಟ್ಟೆಯಲ್ಲಿ ಸೆ.27ರಿಂದ 30ರವರೆಗೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ), ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ವತಿಯಿಂದ 25ನೇ ವರ್ಷದ ತುಂಬೆ ಶ್ರೀ ಶಾರದೋತ್ಸವ, ಶ್ರೀ ಶಾರದಾ ಸಭಾಬವನ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಶಾರದಾ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ.
ಈ ವಿಷಯವನ್ನು ಶ್ರೀ ಶಾರದಾ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಕಳೆದ 24 ವರ್ಷಗಳಿಂದ ಶಾರದಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದ ಸ್ಥಳೀಯರ ಯುವಕರ ತಂಡ, ಧಾರ್ಮಿಕ ಹಾಗೂ ಸೇವಾ ಮನೋಭಾವತಿಂದ ಸಂಘಟನಾತ್ಮಕವಾಗಿ ಒಗ್ಗೂಡಿದ್ದು, ಇದೀಗ ಸಭಾಭವನ ಉದ್ಘಾಟನೆಗೆ ಸಜ್ಜಾಗಿದೆ. ಸೆ.27ರಂದು ಸಂಜೆ ಪೊಳಲಿ ಶ್ರೀ ಗಿರಿಪ್ರಕಾಶ್ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನ ಸಂಪನ್ನಗೊಂಡು ಸೆ. 28 ರಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ವಹಿಸಲಿದ್ದು, ಉದ್ಯಮಿ ಕೃಷ್ಣಪ್ರಸಾದ್ ಶೆಟ್ಟಿ ಪೇರ್ಲಬೈಲು ದೀಪ ಪ್ರಜ್ವಲನೆ ಮಾಡುವರು. ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿರುವುದು. ಸೆ.29ರ ಸೋಮವಾರ ಬೆಳಿಗ್ಗೆ ಶಾರದೆಯ ಪ್ರತಿಷ್ಠೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.| ಪ್ರಭಾಕರ್ ಭಟ್ ಚಾಲನೆ ನೀಡಲಿದ್ದಾರೆ.
ರಜತ ಮಹೋತ್ಸವ ಸಂದರ್ಭದಲ್ಲಿ ಸುಮಾರು 4.25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಜತ ವೀಣೆಯನ್ನು ಸಮರ್ಪಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಅಧ್ಯಕ್ಷ ಗಣೇಶ ಸುವರ್ಣ ತುಂಬೆ, ಪ್ರಧಾನ ಕಾರ್ಯದರ್ಶಿ ದಿವಾಕರ ಪೇರ್ಲಬೈಲು ತುಂಬೆ, ಉತ್ಸವ ಸಮಿತಿ ಅಧ್ಯಕ್ಷ ರಾಘವ ಬಂಗೇರ ಪೇರ್ಲಬೈಲು, ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೋಟ್ಯಾನ್ ಕುಮ್ಡೇಲ್, ವಿವಿಧ ಸಮಿತಿಗಳ ಪ್ರಮುಖರಾದ ರವೀಂದ್ರ ಕಂಬಳಿ, ಶೋಭಾ ಗೋಪಾಲ ಮೈಂದಾನ್ , ನಾರಾಯಣ ಕಿರೋಡಿಯನ್, ವಿಜಯ ಕುಮಾರ್ ಕಜೆಕಂಡ, ಸದಾನಂದ ಕೋಡಿಯಡ್ಕ, ಗೋಪಾಲ ಬೆದ್ರಾಡಿ, ಜಯಪ್ರಕಾಶ್ ತುಂಬೆ, ಜಗನ್ನಾಥ ತುಂಬೆ, ಗೋಪಾಲ ಬೆದ್ರಾಡಿ, ಪ್ರಶಾಂತ್ ಕೊಟ್ಟಾರಿ, ಆರ್.ಎಸ್.ಜಯ ಉಮಾ ಲಿಂಗಪ್ಪ ಕುಲಾಲ್, ಸಂತೋಷ್ ಕೋಟ್ಯಾನ್ ತುಂಬೆ ಸಹಿತ ಸಮಿತಿ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.