ಒಂದಿಷ್ಟು ವಿದ್ಯಾರ್ಥಿಗಳು ಕೈಯಲ್ಲಿ ಗಾರೆ ಪಿಕ್ಕಾಸು ಕತ್ತಿ ಬುಟ್ಟಿ ಹಿಡಿದುಕೊಂಡು ಸಮುದಾಯದಲ್ಲಿ ಕೆಲಸ ಮಾಡುತ್ತಿರುವುದು.ವಿವಿಧ ಶೈಕ್ಷಣಿಕ ಹಾಗೂ ಸಮಾಜ ಜಾಗೃತಿ ಕಾರ್ಯಕ್ರಮಗಳು ಸಂಜೆ ಸಾಂಸ್ಕೃತಿಕ ಕಲರವ, ಏಳು ದಿನ ಸಮುದಾಯದಲ್ಲಿ ಹೊಸತನ ಇದು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಚಿತ್ರಣ.
ಹೌದು ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಬದುಕಿಗೆ ಅಣಿಗೊಳ್ಳಬೇಕು ಸಮಾಜಿಕ ಜಾಗೃತಿಯ ಜೊತೆಗೆ ಹಳ್ಳಿಗಳ ಅಭಿವೃದ್ಧಿ ದೇಶ ಕಟ್ಟುವ ಯೋಚನೆಗಳ ದೂರ ದೃಷ್ಟಿಯ ಚಿಂತನೆಗಾಗಿ ಹುಟ್ಟಿಕೊಂಡ ಸಂಘಟನೆಯೇ ಎನ್.ಎಸ್. ಎಸ್.ಎನ್.ಎಸ್.ಎಸ್ ಸಂಘಟನೆಯ ಕಾರ್ಯಚಟುವಟಿಕೆಯನ್ನು ಬಹಳ ಸೂಕ್ಷ್ಮ ವಾಗಿ ನೋಡಿದಾಗ ಹಲವು ಕಾರ್ಯವೈಖರಿಗಳು ನಮ್ಮ ಕಣ್ಣ ಮುಂದೆ ಬರಬಹುದು.
ಸೇವೆ : ಶೀರ್ಷಿಕೆ ಗೀತೆಯಲ್ಲಿ ಮೂಡಿ ಬಂದಂತೆ “ಸೇವೆಯ ಮಾಡೋಣ ಬನ್ನಿ” ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ದೇಶದ ಈ ಸಮಾಜದ ಸೇವಕ ನಮ್ಮೊಳಗೆ ಸೇವಾ ಮನೋಭಾವದ ಜಾಗೃತಿಯನ್ನು ಸಾರುತ್ತದೆ.
ಸಮಯ ಪಾಲನೆ ಹಾಗೂ ಶಿಸ್ತು: ಬೆಳ್ಳಗೆ ಬೇಗ ಏಳುವುದ್ದರಿಂದ ಹಿಡಿದು ನಿಗದಿತ ಕಾರ್ಯಚಟುವಟಿಕೆಗಳು ಪ್ರತಿ ಕ್ಷಣವು ದಿನಚರಿಯಂತೆ ಮುಗಿಸಲು ನಡೆಸುವ ಕಸರತ್ತುಗಳು ಇದು ಸಮಯದ ಮಹತ್ವ ಸಾರುವುದರೊಂದಿಗೆ ಅರಿವು ನೀಡುತ್ತದೆ.ಪಾದರಕ್ಷೆಗಳ ಜೋಡಣೆ, ಸಮಯದ ಪಾಲನೆ,ಅತಿಥಿ ಸತ್ಕಾರ,ನಿಷ್ಕಲ್ಮಶ ಬಾಂಧವ್ಯಗಳು ಸೇವೆಗಳು ಇವುಗಳು ಭವಿಷ್ಯದಲ್ಲಿ ಶಿಸ್ತು ಮೈಗೂಡಿಸಿಕೊಳ್ಳಲು ಪ್ರೇರಣೆಯಾಗುತ್ತದೆ.
ಪ್ರತಿಭೆಗಳಿಗೆ ಪ್ರೋತ್ಸಾಹ ವೇದಿಕೆ : ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಅದೆಷ್ಟೋ ಪ್ರತಿಭೆ ಕೌಶಲ್ಯಗಳು ಇರುತ್ತದೆ. ಇವುಗಳನ್ನು ಹೊರ ತೆಗೆಯುವಲ್ಲಿ ವಿಶಿಷ್ಟ ಕೊಡುಗೆ ನೀಡುತ್ತದೆ.ವಿಶೇಷವಾಗಿ ವಾರ್ಷಿಕ ಶಿಬಿರದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಬೇಕಾದ ನಿಯಮಗಳು ಸಿಗುವ ವೇದಿಕೆಗಳು ಕೂಡ ಪರೋಕ್ಷವಾದ ಬೆಳವಣಿಗೆಗೆ ಕಾರಣವಾದ ಹಲವು ನಿರ್ದಶನಗಳಿವೆ.
ವ್ಯಕ್ತಿತ್ವ ವಿಕಸನ ಹಾಗೂ ಮಾನವೀಯ ಸಂಬಂಧ ಬೆಳವಣಿಗೆ.: ಪ್ರತಿ ವರುಷ ನಡೆಯುವ ವಿವಿಧ ಚಟುವಟಿಕೆ,ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಸಂಪನ್ಮೂಲದ ವಿಚಾರಧಾರೆಗಳು ವ್ಯಕ್ತಿತ್ವದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದರೆ ಒಟ್ಟಾಗಿ ಸೇರಿ ನಡೆಸುವ ವಿವಿಧ ಕಾರ್ಯಚಟುವಟಿಕೆ, ಆಹಾರದ ತಯಾರಿ, ಊಟ ಉಪಹಾರದ ಸೇವನೆ ,ನೀಡುವ ಸೇವಾ ಕಾರ್ಯ ಮನರಂಜನೆಗಳು ವಿಶೇಷವಾಗಿ ವಾರ್ಷಿಕ ಶಿಬಿರದ ದಿನಗಳು, ಕೌಟುಂಬಿಕ ಸಂಬಂಧವನ್ನು ಬೆಸೆಯುತ್ತದೆ.ನಿಸ್ವಾರ್ಥ ಪ್ರೀತಿಯನ್ನು ಚಿಮ್ಮಿಸುತ್ತದೆ ನಾವು ನಮ್ಮವರು ಎಂಬ ಬಾಂಧವ್ಯವನ್ನು ಬೆಸೆಯುತ್ತದೆ.
ನಾಯಕತ್ವ ಹಾಗೂ ಹೊಂದಾಣಿಕೆಯ ಕಾಣಿಕೆ : ಕಾಲೇಜು ಜೀವನದಲ್ಲಿ ಅತಿ ಹೆಚ್ಚು ಕ್ರಿಯಾಶೀಲತೆಯಲ್ಲಿರುವುದ್ದರಿಂದ ಸಂಘದ ಸದಸ್ಯನಿಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವ ಅನಿವಾರ್ಯತೆಯು ಇರುವುದರಿಂದ ಹಲವು ಕ್ಷೇತ್ರದಲ್ಲಿ ನಾಯಕರು ಹುಟ್ಟಿಕೊಳ್ಳಲು ಕಾರಣವಾಗಿದೆ. ಶಿಬಿರದ ಸಂಧರ್ಭದಲ್ಲಿ ಶಿಬಿರದ ನಾಯಕರು ಸೇರಿದಂತೆ ರಚನೆಯಾದ ವಿವಿಧ ತಂಡಗಳ ನಾಯಕತ್ವಗಳು ತನ್ನ ತಂಡವೆಂಬ ಅಭಿಮಾನ ಹಾಗೂ ಪ್ರಶಂಸೆಗಾಗಿ ಪೈಪೋಟಿಗಳು ನಾಯಕತ್ವ ಗುಣಗಳನ್ನು ಹೆಚ್ಚಿಸಿದರೆ ಹಿರಿಯರು ಕಿರಿಯರು ಶ್ರೀಮಂತ ಬಡವರು ಭೇಧವಿಲ್ಲದೆ ಪ್ರದೇಶ ಸಮಯ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಜೀವನ ಶೈಲಿಗಳು ಮುಂದೆ ಬದುಕಿನ ದಿನಗಳು ಒಂದು ಮಹತ್ವದ ಪಾಠ ನೀಡುತ್ತದೆ.
ಕೊನೆಯ ಮಾತು : ಇಂದು ಅಕ್ಷರ ಜ್ಞಾನ ಹೆಚ್ಚಿದಂತೆ ಕುಸಿತ ಕಾಣುತ್ತಿರುವ ಮಾನವೀಯ ಮೌಲ್ಯ,ನಿಸ್ವಾರ್ಥ ಭಾವಗಳು,ಸೇವಾ ಮನಸ್ಥಿತಿಗಳು, ಹೊಂದಾಣಿಕೆ ಸಮಸ್ಯೆ,ನಿಷ್ಕಲ್ಮಶ ಸಂಬಂಧದ ಭಾವಗಳು, ಜೊತೆಗೆ ಹೆಚ್ಚುತ್ತಿರುವ ವಿವಿಧ ಸಮುದಾಯದ ಸಮಸ್ಯೆ, ಇವುಗಳ ನಡುವೆ ನಮ್ಮನ್ನು ನಾವು ಅರ್ಥ ಮಾಡಿಕೊಂಡು ನಮ್ಮ ಬದಲಾವಣೆಯೊಂದಿಗೆ ಸಮಾಜದ ಬದಲಾವಣೆಗಾಗಿ ಜಾಗೃತಿ ಸಾರಲು, ಸಮಾಜಮುಖಿಯಾಗುವ ಅವಕಾಶದೊಂದಿಗೆ ಸಮಸ್ಯೆಯನ್ನು ಸಮುದಾಯದಲ್ಲಿಯೇ ನಿಂತು ಅರ್ಥ ಮಾಡಿಕೊಳ್ಳಲು ಒಂದು ಅಧ್ಯಾಯ ಕೇಂದ್ರವು ಹೌದು. ವ್ಯಕ್ತಿ ನಿರ್ಮಾಣದ ಜೊತೆಗೆ ರಾಷ್ಟ್ರ ನಿರ್ಮಾಣದ ಕರ್ತವ್ಯ, ಜವಾಬ್ದಾರಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅರಿವು ನೀಡುವ ಅಧ್ಯಯನ ಕೇಂದ್ರವು ಹೌದು.ಯಾಕೆಂದರೆ ಎಸ್.ಎಸ್.ನ ಧ್ಯೇಯ ವಾಕ್ಯವೇ “ನನಗಲ್ಲ ನಿನಗೆ” ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಎನ್.ಎಸ್ ಎಸ್ ನ ಮಹತ್ವಗಳು ಅರ್ಥವಾಗಬಹುದು.