ಸವಿತಾ ಸೌಹಾರ್ದ ಸಹಕಾರಿ ವರದಿ ಸಾಲಿನಲ್ಲಿ ೬೪.೩೧ ಕೋ.ರೂ. ವ್ಯವಹಾರ ನಡೆಸಿ ೧೮,೦೦,೮೪೯ ರೂ. ನಿವ್ವಳ ಲಾಭಗಳಿಸಿದೆ ಎಂದು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಬಂಟ್ವಾಳ ತಿಳಿಸಿದ್ದು, ೧೩ ಶೇ. ಡಿವಿಡೆಂಡ್ ಘೋಷಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸವಿತಾ ಸೌಹಾರ್ದ ಸಹಕಾರಿಯ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂಘದ ವಿಸ್ತರಿತ ಹವಾನಿಯಂತ್ರಿತ ಪ್ರಧಾನ ಕಚೇರಿ ಹಾಗೂ ಶಾಖಾ ಕಚೇರಿ ಶುಭಾರಂಭವೂ ಈ ಸಂದರ್ಭ ನಡೆಯಿತು. ಸುರತ್ಕಲ್ ಶಾಖೆಯ ಆರಂಭ, ಮಂಗಳೂರು ಶಾಖೆಯ ಸ್ಥಳಾಂತರ ಹಾಗೂ ಪ್ರಧಾನ ಕಚೇರಿಯ ವಿಸ್ತರಣೆಯಾಗಿದೆ. ವರದಿ ಸಾಲಿನ ಅಂತ್ಯಕ್ಕೆ ೨೮,೫೯,೯೫೫ ರೂ. ಪಾಲು ಬಂಡವಾಳ, ೧೫,೭೭,೦೧,೬೩೯ ರೂ. ಠೇವಣಾತಿ ಹೊಂದಿದೆ. ಒಟ್ಟು ೧೪ ಕೋ.ರೂ. ಸಾಲ ಹೊರಬಾಕಿ ಇರುತ್ತದೆ ಎಂದವರು ಮಾಹಿತಿ ನೀಡಿದರು.
ಸಹಕಾರಿಯ ಉಪಾಧ್ಯಕ್ಷ ಸುರೇಶ್ ನಂದೊಟ್ಟು ಪ್ರಸ್ತಾವನೆಗೈದು, ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿ ಮುಂದೆ ಮೂಡುಬಬಿದಿರೆಯಲ್ಲಿ ಶಾಖೆ ತೆರೆಯುವ ಯೋಜನೆಯನ್ನು ತಿಳಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶನ್ ಎಸ್. ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಇಬ್ಬರಿಗೆ ಸವಿತಾ ಆರೋಗ್ಯ ನಿಧಿ ಹಸ್ತಾಂತರಿಸಲಾಯಿತು. ಇಬ್ಬರು ಪಿಗ್ಮಿ ಸಂಗ್ರಾಹಕರನ್ನು ಗೌರವಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಆನಂದ ಭಂಡಾರಿ ಗುಂಡದಡೆ, ಮೋಹನ್ ಭಂಡಾರಿ ಪೊಯಿತ್ತಾಜೆ, ಭುಜಂಗ ಸಾಲಿಯಾನ್ ಬಿ.ಸಿ.ರೋಡು, ಪದ್ಮನಾಭ ಭಂಡಾರಿ ಸುಳ್ಯ, ಎಸ್.ರವಿ ಮಡಂತ್ಯಾರು, ವಸಂತ ಎಂ.ಬೆಳ್ಳೂರು, ಸುಮಲತಾ ಪುತ್ತೂರು, ಆಶಾ ಕಂದಾವರ ಉಪಸ್ಥಿತರಿದ್ದರು. ನಿರ್ದೇಶಕ ದಿನೇಶ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.