ಕವರ್ ಸ್ಟೋರಿ

Digital Estamp: ಕಾವೇರಿ ತಂತ್ರಾಂಶದಲ್ಲಿ ಬಂತು ಡಿಜಿಟಲ್ ಇ ಸ್ಟ್ಯಾಂಪ್

 ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲಿ ಇದೀಗ ಡಿಜಿಟಲ್ ಇ ಸ್ಟ್ಯಾಂಪ್ ಸೇವೆ ಲಭ್ಯ. ಸ್ಟ್ಯಾಂಪ್ ಪೇಪರ್ ಪಡೆಯುವ ಹಳೆಯ ವಿಧಾನ ನಿಧಾನವಾಗಿ ಮರೆಯಾಗಲಿದ್ದು, ಪರಿಸರಸ್ನೇಹಿ ಹಾಗೂ ಸಮಯ ಉಳಿತಾಯಕ್ಕೆ ಮಹತ್ವದ ಕೊಡುಗೆ ನೀಡಲಿರುವ ಡಿಜಿಟಲ್ ಇ ಸ್ಟ್ಯಾಂಪ್ ಸೇವೆಯಿಂದಾಗಿ ಬಹಳಷ್ಟು ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಮನೆ ಬಾಡಿಗೆ ಅಥವಾ ಭೋಗ್ಯಕ್ಕೆ ಸಂಬಂಧಪಟ್ಟಂತೆ ಒಪ್ಪಂದ ಮಾಡಿಕೊಳ್ಳಲು ಇ-ಸ್ಟ್ಯಾಂಪ್‌ಪತ್ರಕ್ಕಾಗಿ ಸಹಕಾರ ಸಂಘಗಳಿಗೆ ತೆರಳಬೇಕಿತ್ತು. ಕೆಲವು ಸಂದರ್ಭದಲ್ಲಿ ರಜೆ ಅಥವಾ ಸರ್ವರ್‌ಸಮಸ್ಯೆಯಿಂದ ತುರ್ತಾಗಿ ಬೇಕಾದಾಗ ಇದು ಸಿಗುತ್ತಿರಲಿಲ್ಲ. ಪ್ರತಿನಿತ್ಯ ಸಾರ್ವಜನಿಕರ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ 24 ಗಂಟೆ ಕಾಲವೂ ಆನ್‌ಲೈನ್‌ಮೂಲಕ ಇ-ಸ್ಟ್ಯಾಂಪ್‌ಪೇಪರ್‌(ಒಪ್ಪಂದ ಪತ್ರ) ಹಾಗೂ ಕಾನೂನು ದಾಖಲೆ ಕರಡು ಪ್ರತಿಯನ್ನು ಜನರಿಗೆ ತಲುಪಿಸುವ ಸೇವೆ ಇದಾಗಿದೆ. ಪ್ರಸ್ತುತ ನೋಂದಣಿ ಕಡ್ಡಾಯವಲ್ಲದ ದಸ್ತಾವೇಜುಗಳಿಗೆ ಡಿಜಿಟಲ್ ಇ ಸ್ಟ್ಯಾಂಪ್ ಪೇಪರ್ ನೀಡಲಾಗುತ್ತಿದೆ. ಪಕ್ಷಕಾರರ ಆಧಾರ್ ಆಧರಿತ ಸಹಿ ಅಗತ್ಯ. ಇದರ ಜತೆಗೆ ಫೊಟೋ ಸಹಿತ ಡಿಜಿಟಲ್ ಇ ಸ್ಟ್ಯಾಂಪ್ ನಲ್ಲಿ ಅಚ್ಚಾಗುತ್ತದೆ.

ಜಾಹೀರಾತು

ಯಾರಿಗೆಲ್ಲಾ ಅನುಕೂಲ?

ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಐಟಿ ಉದ್ಯೋಗಿಗಳು, ಸರಕಾರಿ ನೌಕರರು ಸಹಿತ ನಾನಾ ವರ್ಗದವರಿಗೆ ಛಾಪಾ ಕಾಗದದ ಮೇಲೆ ಮಾಡುವ ಒಪ್ಪಂದ, ಕರಾರು ಪತ್ರಗಳಿಗೆ ಇದು ಅನುಕೂಲ. ಬ್ಯಾಂಕ್ ಗ್ಯಾರಂಟಿ, ಸಾಲ ಒಪ್ಪಂದ, ಇಂಡೆಮ್ನಿಟಿ ಬಾಂಡ್, ಹೈಪೊಥೆಕೇಶನ್ ಕರಾರು, ಪಣ, ಅಡಮಾನ, ಡಿಕ್ಲರೇಶನ್, ಪ್ರಾಮಿಸರಿ ನೋಟ್ಸ್, ಅಫಿದವಿತ್, ಸ್ವಾಧೀನರಹಿತ ಕ್ರಯದ ಕರಾರು ಮಾಡಿಸಿಕೊಳ್ಳುವವರಿಗೆ ಇದು ಅನುಕೂಲವಾಗಲಿದೆ.

 

ಹೇಗೆ ಇದನ್ನು ಪಡೆಯುವುದು?

ಕಾವೇರಿ 2.0 ತಂತ್ರಾಂಶದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನೋಂದಾಯಿಸಿಕೊಂಡು ಲಾಗಿನ್ ಮಾಡಿ, ನಂತರ ಡಿಜಿಟಲ್ ಇ-ಸ್ಟ್ಯಾಂಪ್ ಸೇವೆ ಮೇಲೆ ಕ್ಲಿಕ್ ಮಾಡಿ, ನಿಮ್ಮ ಡಾಕ್ಯುಮೆಂಟ್‌ಸ್ವರೂಪವನ್ನು ಆಯ್ಕೆ ಮಾಡಿ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಸ್ಟ್ಯಾಂಪ್ ಡ್ಯೂಟಿಯನ್ನು ಆನ್ಲೈನ್ನಲ್ಲಿ ಪಾವತಿಸಿ. ಅಂತಿಮವಾಗಿ ಡಿಜಿಟಲ್ ಇ-ಸ್ಟ್ಯಾಂಪ್ ಪ್ರಮಾಣಪತ್ರವನ್ನು ಪಡೆಯಿರಿ.

ಪಡೆಯುವ 5 ಹಂತಗಳು:

  1. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  2. ನೋಂದಾಯಿಸಿ: ನೀವು ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಸೇರಿದಂತೆ ನಿಮ್ಮ ವಿವರಗಳನ್ನು ನಮೂದಿಸಿ ನೋಂದಾಯಿಸಿ ಮತ್ತು ನಿಮ್ಮ ಮೊಬೈಲ್ ಮತ್ತು ಇಮೇಲ್ ಅನ್ನು OTP ಮೂಲಕ ಪರಿಶೀಲಿಸಿ.
  3. ಲಾಗಿನ್ ಮಾಡಿ: ನಿಮ್ಮ ನೋಂದಾಯಿತ ರುಜುವಾತುಗಳನ್ನು ಬಳಸಿ ಲಾಗಿನ್ ಮಾಡಿ. ಲಾಗಿನ್ ಆದ ನಂತರ, “ಡಿಜಿಟಲ್ ಇ-ಸ್ಟ್ಯಾಂಪ್” ಸೇವೆ ಮೇಲೆ ಕ್ಲಿಕ್ ಮಾಡಿ. ಡಾಕ್ಯುಮೆಂಟ್ಸ್ವರೂಪ ಆಯ್ಕೆಮಾಡಿ: ನಿಮ್ಮ ಡಾಕ್ಯುಮೆಂಟ್ ಅಥವಾ ವಹಿವಾಟಿನ ಸ್ವರೂಪವನ್ನು ಆಯ್ಕೆಮಾಡಿ.
  4. ವಿವರಗಳನ್ನು ಭರ್ತಿ ಮಾಡಿ: ಡಾಕ್ಯುಮೆಂಟ್ವಿವರಗಳು, ಸ್ಟ್ಯಾಂಪ್ ಪೇಪರ್ಮೊತ್ತ ಇತ್ಯಾದಿ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.
  5. ಸ್ಟ್ಯಾಂಪ್ ಡ್ಯೂಟಿ ಪಾವತಿಸಿ: ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಇತರ ಆನ್ಲೈನ್ ಪಾವತಿ ವಿಧಾನಗಳನ್ನು ಬಳಸಿ ಸ್ಟ್ಯಾಂಪ್ ಡ್ಯೂಟಿಯನ್ನು ಪಾವತಿಸಿ. ಇ-ಸ್ಟ್ಯಾಂಪ್ ಪ್ರಮಾಣಪತ್ರ ಪಡೆಯಿರಿ: ಯಶಸ್ವಿ ಪಾವತಿಯ ನಂತರ, ವಿಶಿಷ್ಟ ಗುರುತಿನ ಸಂಖ್ಯೆ (ಯುಐಎನ್) ಯೊಂದಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಪ್ರಮಾಣಪತ್ರವನ್ನು ರಚಿಸಲಾಗುತ್ತದೆ. ನಂತರ ನೀವು ಇ-ಸ್ಟ್ಯಾಂಪ್ ಮಾಡಿದ ಡಾಕ್ಯುಮೆಂಟ್ ಅನ್ನು ಡೌನ್ಲೋಡ್ ಮಾಡಬಹುದು
ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.