ನೂತನ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಎನ್. ಭೂಮರೆಡ್ಡಿ ಹೇಳಿದ್ದಾರೆ.
ಬಂಟ್ವಾಳದ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನಡೆದ ಬ್ಯಾಂಕ್ ಮ್ಯಾನೇಜರ್ ಹಾಗೂ ಆಭರಣದ ಮಳಿಗೆಗಳ ಮಾಲೀಕರ ಸಭೆಯಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ದೃಷ್ಟಿಯಿಂದ ಬ್ಯಾಂಕ್ ಹಾಗೂ ಆಭರಣದ ಮಳಿಗೆಗಳ ಮಾಲೀಕರಿಗೆ ಸುರಕ್ಷತೆಗಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ಅವರು ಹೇಳಿದರು. ಯಾವುದೇ ಅಹಿತಕರ ಘಟನೆಗಳು ನಡೆದ ವೇಳೆ ಅಲಾರಮ್ ಮೊಳಗುವಂಥ ವ್ಯವಸ್ಥೆಗಳನ್ನು ಕಲ್ಪಿಸಬೇಕು,ಎಟಿಎಂಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು ಎಂದರು.
ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ಮಾತನಾಡಿ, ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಗಳಲ್ಲಿ ಕಳ್ಳತನ ಮಾಡುವುದು ಕಂಡುಬಂದಿದ್ದು, ಅಂಗಡಿಗಳಿಗೆ ಬರುವ ಗ್ರಾಹಕರು ಮತ್ತು ಅಂಗಡಿ ಕೆಲಸಗಾರರ ಬಗ್ಗೆ ಕೂಡ ಗಮನವಿರಲಿ. ಅಂಗಡಿಯ ಸುತ್ತ ಮುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.ಅಂಗಡಿ ಕೋಣೆಗಳ ಸೂಕ್ಷ್ಮವಾದ ಜಾಗಗಳ ಬಗ್ಗೆ ಮಾಲೀಕರಿಗೆ ಅರಿವಿರಬೇಕು.
ಸಂಶಯಾಶ್ಪದ ಗ್ರಾಹಕರು ಬಂದರೆ ಪೋಲೀಸರಿಗೆ ಮಾಹಿತಿ ನೀಡಿದರೆ ಉತ್ತಮ. ಅಂಥ ಘಟನೆಗಳಾದಾಗ ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಗ್ರಾಮಾಂತರ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ವಿಟ್ಲ ಎಸ್.ಐ.ರಾಮಕೃಷ್ಣ ಸ್ವಾಗತಿಸಿ, ಸಿಬ್ಬಂದಿ ವಿವೇಕ್ ರೈ ಕಾರ್ಯಕ್ರಮ ನಿರೂಪಿಸಿದರು.