ಕುಡಿಯುವ ನೀರಿನ ವಿತರಣೆ ಸಮಸ್ಯೆ, ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ವಿಚಾರ, ಪಾಣೆಮಂಗಳೂರು ಬ್ರಿಟಿಷರ ಕಾಲದ ಸೇತುವೆ ನಿರ್ವಹಣೆ, ಟಾಯ್ಲೆಟ್ ಕಟ್ಟಿದರೂ ಓಪನ್ ಆಗದೇ ಇರುವುದು ಸಹಿತ ಹಲವು ವಿಚಾರಗಳು ಸೋಮವಾರ ಬಂಟ್ವಾಳ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಬಿ.ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದವು.
ತನ್ನ ವಾರ್ಡಿನಲ್ಲಿ ನೀರಿನ ಪೈಪ್ ಸಂಪರ್ಕವಾಗಿದೆಯೇ ಹೊರತು, ನೀರು ಬರುತ್ತಿಲ್ಲ. ಆದರೆ ಬಿಲ್ ಕೊಟ್ಟು ಹೋಗಿದ್ದಾರೆ ಇದೆಂಥ ಕಾರ್ಯವೈಖರಿ ಎಂದು ಇದ್ರೀಸ್ ಪಿ.ಜೆ. ಪ್ರಶ್ನಿಸಿದರು. ಸದಸ್ಯೆ ಝೀನತ್ ಫಿರೋಜ್ ದನಿಗೂಡಿಸಿ, ತಮ್ಮಲ್ಲೂ ಇಂಥ ಸಮಸ್ಯೆ ಇರುವುದರ ಕುರಿತು ಹೇಳಿದರು. ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಮಾತನಾಡಿ, ಕುಡಿಯುವ ನೀರಿನ ಮೊದಲ ಹಂತದ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರಿಟಿಷರ ಕಾಲದ ಗೂಡಿನಬಳಿಯಲ್ಲಿರುವ ಸೇತುವೆಯ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಿದ್ಧೀಕ್ ಗುಡ್ಡೆಯಂಗಡಿ ಮನವಿ ಮಾಡಿ, ನಮ್ಮಲ್ಲಿ ಹಣ ಇಲ್ಲದಿದ್ದರೆ ಸರಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದರು. ಉಕ್ಕಿನ ಸೇತುವೆ ಮಣ್ಣು ಹಿಡಿಯಬೇಕು ಎಂದು ಕಾಯುವುದಾ ಎಂದು ಗೋವಿಂದ ಪ್ರಭು ಕೇಳಿದರು. ಸೇತುವೆ ಕ್ಲೀನ್ ಮಾಡಲಿಲ್ಲ ಎಂದು ಸ್ಥಳೀಯ ಸದಸ್ಯ ಇದ್ರೀಸ್ ಹೇಳಿದರು.
ಬೀದಿದೀಪ ಖರೀದಿ, ವಿತರಣೆಯ ವಿಷಯದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಂಚಿನಡ್ಕಪದವಿನಲ್ಲಿ ಇತರ ಪಂಚಾಯತ್ ನಿಂದ ಕಸವನ್ನು ತಂದು ವಿಲೇವಾರಿ ಮಾಡುತ್ತಿರುವ ವಿಚಾರವನ್ನುಮಾಜಿ ಅಧ್ಯಕ್ಷರಾದ ರಾಮಕೃಷ್ಣ ಆಳ್ಬ ಮತ್ತು ಮಹಮ್ಮದ್ ಶರೀಫ್ ಗಮನ ಸೆಳೆದರು.
ಬಿ.ಸಿ.ರೋಡಿನಲ್ಲಿರುವ ಪಿಂಕ್ ಶೌಚಾಲಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರವೇಶ ನೀಡಬೇಕಾಗಿದ್ದು, ಅದೀಗ ಮುಚ್ಚಿರುವುದು ಏಕೆ ಎಂದು ಗೋವಿಂದ ಪ್ರಭು ಪ್ರಶ್ನಿಸಿದರು. ಅವರಿಗೆ ಕನಿಷ್ಠ ರಿಯಾಯಿತಿ ದರದಲ್ಲಿ ಪ್ರವೇಶ ನೀಡಬಹುದಲ್ಲವೇ ಎಂದು ಪ್ರಭು ಪ್ರಶ್ನಿಸಿದರು. ಅಲ್ಲೇ ಪಕ್ಕದಲ್ಲಿ ಪುರುಷರ ಶೌಚಾಲಯ ಮಾಡುವ ಪ್ರಸ್ತಾಪವನ್ನು ಅಧ್ಯಕ್ಷ ವಾಸು ಪೂಜಾರಿ ಮಂಡಿಸಿ ಸಲಹೆ ಕೇಳಿದರು. ಇದೇ ವೇಳೆ ಪಾಣೆಮಂಗಳೂರಿನಲ್ಲಿ ಕಟ್ಟಲಾದ ಟಾಯ್ಲೆಟ್ ಉದ್ಘಾಟನೆ ಯಾವಾಗ ಎಂದು ಸದಸ್ಯರಾದ ಇದ್ರೀಸ್ ಮತ್ತು ಸಿದ್ದೀಕ್ ಪ್ರಶ್ನಿಸಿದರು.
ಬಿ.ಸಿ.ರೋಡಿನಲ್ಲಿ ರಸ್ತೆ ಅತಿಕ್ರಮಣ, ಫುಟ್ ಪಾತ್ ಅತಿಕ್ರಮಣದ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿದ್ದ ಉಪಾಧ್ಯಕ್ಷ ಮೊನೀಶ್ ಆಲಿ, ಸದಸ್ಯರಾದ ಹರಿಪ್ರಸಾದ್, ವಿದ್ಯಾವತಿ ಪ್ರಮೋದ್ ಕುಮಾರ್, ಮಹಮ್ಮದ್ ನಂದರಬೆಟ್ಟು ಸಹಿತ ಹಲವು ಸದಸ್ಯರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು. ಪುರಸಭೆ ಸಿಬ್ಬಂದಿ ರಝಾಕ್, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಸ್ವಾಗತಿಸಿ, ವಂದಿಸಿದರು.