ಬ್ರಹ್ಮಶ್ರೀ ನಾರಾಯಣಗುರುವರ್ಯರ 171ನೇ ಜನ್ಮದಿನಾಚರಣೆ ಕಾರ್ಯಕ್ರಮ ಭಾನುವಾರ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಜೈರಾಜ್ ಕುದ್ರೋಳಿ ಮಾತನಾಡಿ, ಬಂಟ್ವಾಳ ತಾಲೂಕಿನ ಬಿಲ್ಲವ ಸಮಾಜ ಸೇವಾ ಸಂಘ ಸಮಾಜಮುಖಿ ಕಾರ್ಯಚಟುವಟಿಕೆಗಳಿಂದ ಗಮನ ಸೆಳೆಯುತ್ತಿದ್ದು, ಸಮಾಜದ ಎಲ್ಲರಿಗೂ ಅನುಕೂಲವಾಗುವಂಥ ಕೆಲಸಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳು ಹಾಗೂ ಭವಿಷ್ಯದ ಕಾರ್ಯಸೂಚಿಗಳನ್ನು ವಿವರಿಸಿ, ಸಮಾಜದ ಪಾಲ್ಗೊಳ್ಳುವಿಕೆಯಿಂದ ಸಂಘಟನೆ ಮತ್ತಷ್ಟು ಬಲಯುತವಾಗಿ, ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ ಎಂದರು.
ಉಪನ್ಯಾಸ ನೀಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಯೋಗೀಶ್ ಕೈರೋಡಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ನಮ್ಮ ಜೀವನದಲ್ಲಿ ಮನುಷ್ಯನೇ ಸೃಷ್ಟಿಸಿದ ಕತ್ತಲೆಯನ್ನು ತೊಡೆದವರು. ಸಮಾಜ ಪರಿವರ್ತನೆ ಮಾಡುವ ತೇಜೋಶಕ್ತಿಯಾದವರು. ಜಾತಿಯಲ್ಲ, ಜಾತಿಬೇಧ ಸಮಸ್ಯೆ ಎಂಬುದನ್ನು ತಿಳಿದು ಧನಾತ್ಮಕವಾಗಿ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದವರು. ಹತಾಶೆ, ಸೋಲಿನತ್ತ ಸಾಗುವವರಿಗೆ ಸಂಘ ಶಕ್ತಿಯಾಗಬೇಕು, ಇದು ಬ್ರಹ್ಮಶ್ರೀ ನಾರಾಯಣಗುರುಗಳು ಹಾಕಿಕೊಟ್ಟ ಪಥ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆಯನ್ನು ಮನೆ ಮನೆಗೆ ತಲುಪಿಸಿದರೆ ದೇಶ ಉಳಿಯುತ್ತದೆ. ದೇಶದ ಧಾರ್ಮಿಕ ಸತ್ಯವನ್ನು ಪ್ರಪಂಚಕ್ಕೆ ತಿಳಿಸಿದವರ ಪೈಕಿ ಬ್ರಹ್ಮಶ್ರೀ ನಾರಾಯಣಗುರುಗಳು ಮುಂಚೂಣಿಯಲ್ಲಿದ್ದಾರೆ. ಬಿಲ್ಲವರು ಸನಾತನ ಹಿಂದು ಧರ್ಮಕ್ಕೆ ಸೇರಿದವರು. ಅವರು ಜ್ಞಾನಿಗಳಾಗಬೇಕು, ಸ್ವಾವಲಂಬಿಗಳಾಗಬೇಕು. ದುಡಿಮೆ ಕಷ್ಟಕ್ಕೆ ಪರಿಹಾರ ಎಂಬ ಸತ್ಯವನ್ನು ತಿಳಿದುಕೊಳ್ಳಬೇಕು. ಹಿಂದು ಸಮಾಜದ ಉಳಿವಿಗೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಮಾರ್ಗದರ್ಶನದಂತೆ ಇಂದು ಸಂಘಟನೆ ನದಿಯಂತೆ ಹರಿಯಬೇಕು, ಗುರುಗಳ ಸಂದೇಶದೊಂದಿಗೆ ಬಲಯುತರಾಗಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ತಾಲೂಕಿನ ಬಿಲ್ಲವ ಸಂಘಟನೆಗಳ ಅಧ್ಯಕ್ಷ, ಪದಾಧಿಕಾರಿಗಳು, ಮಹಿಳಾ ಸಂಘದ ಅಧ್ಯಕ್ಷೆ ರಾಗಿಣಿ ಮಾಧವ, ಯುವವಾಹಿನಿ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್.ಜಕ್ರಿಬೆಟ್ಟು, ಕೋಶಾಧಿಕಾರಿ ಸುನಿಲ್ ಎನ್.ಕುಂದರ್, ಲೆಕ್ಕಪರಿಶೋಧಕ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು ವಂದಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.
ಸಾಧಕರಿಗೆ ಸನ್ಮಾನ:
ಕಂಬಳ ಕ್ಷೇತ್ರದ ಸಾಧಕರಾದ ಸತೀಶ್ಚಂದ್ರ ಇರುವೈಲ್, ಧಾರ್ಮಿಕ ಕ್ಷೇತ್ರದ ಸಾಧಕರಾದ ಶಂಭೂರಿನ ದಕ್ಷಿಣದ ಶಿರ್ಡಿ ಸಾಯಿಬಾಬಾ ಮಂದಿರದ ಸೂರಜ್, ಸಾಮಾಜಿಕ ಕ್ಷೇತ್ರದಲ್ಲಿ ಮಂಗಳೂರು ಹಸಿರುದಳದ ನಾಗರಾಜ್ ಅಂಚನ್ ಬಜಾಲ್ ಅವರನ್ನು ಸನ್ಮಾನಿಸಲಾಯಿತು. ಪರಿಚಯವನ್ನು ಶಂಕರ್ ಸುವರ್ಣ, ಗಣೇಶ್ ಪೂಂಜರಕೋಡಿ, ಪ್ರೇಮನಾಥ ಕರ್ಕೇರಾ ಮಾಡಿದರು. ಇದೇ ಸಂದರ್ಭ ಅಕ್ಷರ ಪುರಸ್ಕಾರವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರಾರ್ಥನಾ, ಕೀರ್ತಿ, ದಿಯಶ್ರೀ ರಿತಿಕ್ ಅವರನ್ನು ಸನ್ಮಾನಿಸಲಾಯಿತು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಗ್ಗೆ ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿ ಪಚ್ಚಿನಡ್ಕ, ನಾಗಶ್ರೀ ಭಜನಾ ಮಂದಿರ ತೆಂಕಬೆಳ್ಳೂರು ವತಿಯಿಂದ ಭಜನೆ, ಬಳಿಕ ಗುರುಪೂಜೆ ನಡೆಯಿತು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಮತ್ತು ಯುವವಾಹಿನಿ ಬಂಟ್ವಾಳ ಘಟಕ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.