ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ, ನಾಟಕ, ದೈವಕೋಲ, ನೇಮ, ಭರತನಾಟ್ಯ ಇತ್ಯಾದಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗಿನ ತೊಂದರೆಗಳನ್ನು ನಿವಾರಿಸಿ, ಈ ಮೊದಲಿನಂತೆ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಿ ಎಂದು ಸಂಸ್ಕಾರ ಭಾರತಿ ಮನವಿ ಮಾಡಿದೆ.
ಈ ಕುರಿತು ಶುಕ್ರವಾರ ಸಂಜೆ ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಅವರಿಗೆ ನಿಯೋಗ ಮನವಿ ಸಲ್ಲಿಸಿತು. ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಅಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ, ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ಪ್ರಾಂತ ಉಪಾಧ್ಯಕ್ಷೆ ರೂಪಲೇಖ ಪುತ್ತೂರು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂಕಪ್ಪ ಶೆಟ್ಟಿ ಸಂಚಯಗಿರಿ, ಪ್ರಮುಖರಾದ ಮನ್ಮಥ ಶೆಟ್ಟಿ ಪುತ್ತೂರು ಜತೆಗಿದ್ದರು.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರಪಾಡಿ ಅಶೋಕ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಕಠಿಣ ಕ್ರಮಗಳನ್ನು ಅನುಸರಿಸುತ್ತಿದ್ದು, ನಮ್ಮಂಥ ನೂರಾರು ಕಲಾವಿದರು ಜೀವನೋಪಾಯಕ್ಕಾಗಿ ಯಕ್ಷಗಾನ, ನಾಟಕ ಮೊದಲಾದವುಗಳಲ್ಲಿ ತೊಡಗಿಸಿಕೊಂಡವರಾಗಿದ್ದು, ಸಮಸ್ಯೆ ಉಂಟಾಗಿದೆ. ಕಾನೂನು ಸುವ್ಯವಸ್ಥೆ ನೆಪದಲ್ಲಿ ಧಾರ್ಮಿಕ ನಂಬಿಕೆ ಮತ್ತು ಕಲೆಗೆ ತೊಂದರೆ ಕೊಡಬಾರದು. ಎಲ್ಲ ಕಾರ್ಯಕ್ರಮಗಳನ್ನು ಹಿಂದಿನಂತೆ ನಡೆಸಲು ಅವಕಾಶ ನೀಡಬೇಕು. ಈಗಾಗಲೇ ಕಲಾವಿದರ ಒಕ್ಕೂಟ ವತಿಯಿಂದ ಈ ಕುರಿತು ಮನವರಿಕೆ ಮಾಡಲಾಗಿದೆ. ಸಂಸ್ಕಾರ ಭಾರತಿಯಲ್ಲಿ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ, ವೇಣೂರು, ಮೂಡುಬಿದಿರೆ, ಮೂಲ್ಕಿ ತಾಲೂಕು ಸೇರಿ ಸುಮಾರು 750ಕ್ಕೂ ಅಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ಕಲಾವಿದರ ಪರವಾಗಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ಕುರಿತು ರಾಜಕೀಯ ಮಾಡದೆ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಕರೆ ನೀಡಿದರು.