ಕವಿಶಿಷ್ಯ ಹೆಸರಲ್ಲಿ ಪ್ರಸಿದ್ಧರಾಗಿದ್ದ, ನಾಗರಹಾವೇ ಹಾವೊಳು ಹೂವೆ ಹಾಡಿನ ಮೂಲಕ ಪರೋಕ್ಷವಾಗಿ ಬ್ರಿಟಿಷರ ದುರಾಡಳಿತ ವಿರುದ್ಧ ಕಹಳೆಯೂದಿದ್ದ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ ಮಂಗೇಶರಾಯರು ಹುಟ್ಟಿದ ಬಂಟ್ವಾಳದ ಅವರ ಮನೆ ಸನಿಹವೇ ಭವನವೊಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಪರ್ದಿಯಲ್ಲಿ ನಿರ್ಮಾಣವಾಗುತ್ತಿದೆ. ನಿರ್ಮಾಣದ ಕೊನೇ ಹಂತದಲ್ಲಿರುವ ಈ ಕಟ್ಟಡ ಪೂರಕ ಅನುದಾನದ ಕೊರತೆಯಿಂದಾಗಿ ಇನ್ನೂ ಅಂತಿಮವಾಗಿಲ್ಲ.
ಹೆಚ್ಚಿನ ಹಣಕಾಸಿನ ನೆರವಿನ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಪತ್ರವ್ಯವಹಾರಗಳು ನಡೆಯುತ್ತಿದ್ದು, ಅದಾದರೆ ಬಂಟ್ವಾಳದ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ದೊರಕಲಿದೆ. ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ ೧೮೭೪ ಫೆಬ್ರುವರಿ ೨೨ರಂದು ಜನಿಸಿದರು. ಈಗ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರ ಕ್ವಾರ್ಟರ್‍ಸ್ ಇರುವ ಮನೆಯೇ ಪಂಜೆಯವರು ಹುಟ್ಟಿದ, ಬಾಳಿದ ಮನೆ. ಅಲ್ಲೇ ಸನಿಹ ಇರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕ ಒಟ್ಟು ೫೧ ಸೆಂಟ್ಸ್ ಗೆ ಉದ್ದೇಶಿತ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣ ಆಗುತ್ತಿದೆ.
2017ರಲ್ಲಿ ಶಿಲಾನ್ಯಾಸವಾಗಿತ್ತು
2017ರಲ್ಲಿ ಸಚಿವರಾಗಿದ್ದ ಬಿ.ರಮಾನಾಥ ರೈ ನಿರ್ದೇಶನದ ಮೇರೆಗೆ ರೇಖಾ ಅಂದಾಜುಪಟ್ಟಿಯನ್ನು ಕರ್ನಾಟಕ ಗೃಹಮಂಡಳಿ ವತಿಯಿಂದ ತಯಾರಿಸಿ, ಆಡಳಿತ ಅನುಮೋದನೆಗೆ ನೀಡಲಾಗಿತ್ತು. ಆ ವರ್ಷ ಅಕ್ಟೋಬರ್ ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ೫ ಕೋಟಿ ರೂ ವೆಚ್ಚದ ಪ್ರಸ್ತಾಪಿತ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕೂ ಮೊದಲು ೨೦೦೭ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭ ಬಂಟ್ವಾಳದಲ್ಲಿ ಪಂಜೆ ಸ್ಮಾರಕ ನಿರ್ಮಾಣಕ್ಕೆ ೫೦ ಲಕ್ಷ ರೂ ಘೋಷಣೆ ಮಾಡಲಾಗಿತ್ತು. ಆದರೆ ಆಗ ಭವನಕ್ಕೆ ಸ್ಥಳ ನಿಗದಿಯಾಗಿರಲಿಲ್ಲ.
ಹುಟ್ಟಿದ ಮನೆ ಸರ್ಕಾರಿ ಆಸ್ಪತ್ರೆ ಉಪಯೋಗಕ್ಕೆ
ಪಂಜೆಯವರು ಹುಟ್ಟಿದ, ಬಾಳಿದ ಮನೆ ಈಗ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರ ವಸತಿಗೃಹವಾಗಿದೆ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಚನೆಯೂ ಇದೆ. ಸಾರ್ವಜನಿಕರ ಸೇವೆಗೆಂದು ಕವಿಯೊಬ್ಬರು ಹುಟ್ಟಿ, ಬೆಳೆದ ಮನೆಯನ್ನು ಸರಕಾರಕ್ಕೊಪ್ಪಿಸುವುದು ವಿರಳ ಸನ್ನಿವೇಶ. ಅಲ್ಲೇ ಪಕ್ಕದಲ್ಲಿ ಅಮೃತಶಿಲೆಯಲ್ಲಿ ಕೆತ್ತಿದ ಫಲಕವೊಂದು ನೆನಪಿಗಾಗಿ ಇದೆ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ:
ಪಂಜೆ ಮಂಗೇಶರಾಯರು. (ಜನನ:೧೮೭೪ ಫೆಬ್ರುವರಿ ೨೨, ನಿಧನ:೧೯೩೭ ಅಕ್ಟೋಬರ ೨೪ ) ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದು, ಕನ್ನಡದ ಅಧ್ಯಾಪಕರಾಗಿ, ಶಾಲಾ ಇನ್ಸ್ಪೆಪ್ಟರಾಗಿ, ಟ್ರೈನಿಂಗ್ ಶಾಲೆಯ ಅಧ್ಯಾಪಕರಾಗಿ, ಪರೀಕ್ಷಾಕಾರಿಗಳಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿ. ಶಿಶು ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದವರು. ಬಂಟವಾಳದಲ್ಲಿಯೇ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಪುಸ್ತಕಗಳನ್ನು ಸಂಪಾದಿಸಿದರು. ‘ ನಾಗರಹಾವೆ ಹಾವೊಳು ಹೂವೆ ‘-ಇವರ ಪ್ರಸಿದ್ಧ ಬಾಲಗೀತೆ, ಕವಿತೆಯು ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಕವಿತೆಯಾಗಿದೆ. ‘ ಅಣ್ಣನ ವಿಲಾಪ’ ಹೊಸಗನ್ನಡದ ಮೊಟ್ಟಮೊದಲ ಶೋಕಗೀತೆಯಾಗಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಕಥನಕವನಗಳನ್ನು ಬರೆದವರೂ ಪಂಜೆಯವರೆ. ಡೊಂಬರ ಚೆನ್ನ ಯು ಸ್ವತಂತ್ರವಾದ ಕಥನ ಕವನ, ರಂಗಸೆಟ್ಟಿ, ನಾಗಣ್ಣನ ಕನ್ನಡಕ, ಕಡೆಕಂಜಿ ಪ್ರಸಿದ್ಧ ಕಥನ ಕವನಗಳು. ೧೯೦೦ರಲ್ಲಿ ಪಂಜೆಯವರು ‘ನನ್ನ ಚಿಕ್ಕ ತಾಯಿ’ ಎಂಬ ಸಣ್ಣ ಕತೆ ಬರೆದಿದ್ದರು.
ಏನೇನಿದೆ?
ಕುಟುಂಬದವರಿಗೂ ಸಂತಸ
ಈಗ ಸರಕಾರಿ ಆಸ್ಪತ್ರೆಯ ವಸತಿಗೃಹವಾಗಿರುವ ಕವಿಶಿಷ್ಯ ಬಿರುದಾಂಕಿತ ಪಂಜೆ ಮಂಗೇಶರಾಯರ ಮನೆಯ ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಪಂಜೆ ಮಂಗೇಶರಾಯ ಸ್ಮಾರಕ ಭವನದ ಕಾಮಗಾರಿಯನ್ನು ಅವರ ಕುಟುಂಬದ ಸದಸ್ಯರು 2020ರಲ್ಲಿ ವೀಕ್ಷಿಸಿ ಸಂತಸಪಟ್ಟಿದ್ದರು. ಮೊಮ್ಮಗಳಾದ ಉಷಾ ಅರೋರಾ ಮತ್ತು ಅವರ ಪತಿ ಪ್ರಕಾಶ್ ಅರೋರಾ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಂಗೇಶರಾಯರ ಸಾಹಿತ್ಯಕೃತಿಗಳ ಕುರಿತು ಅಧ್ಯಯನ ನಡೆಸಲು ಅವಕಾಶ ಒದಗಿಸುವುದಲ್ಲದೆ ಗ್ರಂಥಾಲಯ, ಸಾಹಿತ್ಯ, ರಂಗಚಟುವಟಿಕೆಗಳಿಗೆ ಅಗತ್ಯವಿರುವ ವೇದಿಕೆ, ಸಭಾಂಗಣ ಇತ್ಯಾದಿ ಸೌಲಭ್ಯಗಳೊಂದಿಗೆ ಭವನವು ನಿರ್ಮಾಣಗೊಳ್ಳುತ್ತಿದೆ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಸಹಾಯಕ ನಿರ್ದೇಶಕ ರಾಜೇಶ್ ಹೇಳಿದರು. ಬಿ.ಸಿ.ರೋಡ್ ನಲ್ಲಿ ಪಂಜೆ ಭವನ ನಿರ್ಮಾಣವಾಗಬೇಕು ಎಂಬುದು ದಶಕಗಳ ಹಿಂದಿನ ಹೋರಾಟವಾಗಿತ್ತು. ಅದನ್ನು ಬಂಟ್ವಾಳದಲ್ಲಿ ನಿರ್ಮಿಸುತ್ತಿದ್ದಾರೆ. ಅದೂ ಪೂರ್ತಿಯಾಗಿಲ್ಲ. ನಾಟಕ ಸಹಿತ ಸಾಂಸ್ಕೃತಿಕ ಪ್ರದರ್ಶನಗಳಿಗೆ ರಂಗಮಂದಿರದ ಕೊರತೆ ಕಾಡುತ್ತಿದೆ ಎನ್ನುತ್ತಾರೆ ರಂಗಕರ್ಮಿ ಮಹಾಬಲೇಶ್ವರ ಟಿ.ಹೆಬ್ಬಾರ